ಸುದ್ದಿ

ಸೂಜಿಯಿಂದ ಚುಚ್ಚದೆಯೇ ಚುಚ್ಚುಮದ್ದು ನೀಡಬಹುದಾದ ನೋ ಪ್ರಿಕ್ಲಿ ಪ್ಯಾಚ್‌ ಆವಿಷ್ಕರಿಸಿದ ಭಾರತೀಯ ವಿಜ್ಞಾನಿಗಳು,..!

133

ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಭಯ ಇದ್ದೇ ಇರುತ್ತದೆ. ಇದಕ್ಕೆ ಮನಃಶಾಸ್ತ್ರದಲ್ಲಿ ಟ್ರೈಪನೋಫೋಬಿಯಾ ಎಂದು ಹೆಸರು. ಈ ಭಯಕ್ಕೆ ಭಾರತದ ವಿಜ್ಞಾನಿಗಳು ಪರಿಹಾರ ಹುಡುಕಿದ್ದಾರೆ. ಸೂಜಿಯಿಂದ ಚುಚ್ಚದೆಯೇ ಚುಚ್ಚುಮದ್ದು ನೀಡಬಹುದಾದ ನೋ ಪ್ರಿಕ್ಲಿ ಪ್ಯಾಚ್‌ ಆವಿಷ್ಕರಿಸಿದ್ದಾರೆ. ಅಹಮದಾಬಾದ್‌,  ಮಕ್ಕಳಿಗೆ ಹುಷಾರು ತಪ್ಪಿತೆಂದರೆ ಪಾಲಕರಿಗೆ ಆಂತಂಕವಾಗುವುದು ಸಹಜ. ಚಿಕಿತ್ಸೆ ಕೊಡಿಸುವಾಗ ಚುಚ್ಚುಮದ್ದು ಕೊಡಿಸುವುದು ಮತ್ತೊಂದು ಸಾಹಸದ ಕಾರ್ಯ. ಕೆಲ ಮಕ್ಕಳಂತೂ ಹಾರಾಡಿ, ಚೀರಾಡಿ ಹಿಡಿತಕ್ಕೇ ಸಿಗದಂತಾಗಿಬಿಡುತ್ತವೆ. ಅಂತಹ ಮಕ್ಕಳ ಕೈಕಾಲು ಕಟ್ಟಿಯೇ ಚುಚ್ಚುಮದ್ದು ನೀಡಬೇಕಾಗುತ್ತದೆ. ನಮ್ಮಲ್ಲಿಯೂ ಹಲವರಿಗೆ ಸೂಜಿ ಚುಚ್ಚುವಾಗ ಕಣ್ಣೀರು ಹರಿದಿರಬಹುದಲ್ಲವೇ.

ಮನಃಶಾಸ್ತ್ರದಲ್ಲಿ ಸೂಜಿಗೆ ಹೆದರುವುದನ್ನು ಟ್ರೈಪನೋಫೋಬಿಯಾ (Trypanophobia)ಎಂದು ಹೇಳುತ್ತಾರೆ. ಅಂದರೆ, ಚರ್ಮಕ್ಕೆ ಸೂಜಿಯಿಂದ ಚುಚ್ಚುವ ಕುರಿತು ಹೆಚ್ಚು ಭಯ ಹೊಂದಿರುವುದು. ಇದೊಂದು ಸಾರ್ವತ್ರಿಕ ಸಮಸ್ಯೆ. ಅಂದರೆ ಪ್ರಪಂಚದ ಎಲ್ಲ ಜನರಲ್ಲೂ ಇಂತಹದೊಂದು ಸಣ್ಣ ಭಯ ಇದ್ದೇ ಇರುತ್ತದೆ. ಈ ಭಯಕ್ಕೀಗ ಭಾರತೀಯ ಸಂಶೋಧನಾ ಸಂಸ್ಥೆ ಪರಿಹಾರ ಹುಡುಕಿರುವುದು ಹೆಮ್ಮೆಯ ವಿಚಾರ.

ಗುಜರಾತಿನ ಬಿವಿ ಪಟೇಲ್‌ ಫಾರ್ಮಾಸುಟಿಕಲ್‌ ಎಜುಕೇಷನ್‌ ಆಂಡ್‌ ರಿಸರ್ಚ್‌ ಡೆವಲಪ್‌ಮೆಂಟ್‌ (PERD)ಸಂಸ್ಥೆಯ ವಿಜ್ಞಾನಿಗಳು ಪಾಲಿಮರ್‌ ಬಳಸಿ ಅತಿಸೂಕ್ಷ್ಮ ಸೂಜಿಗಳನ್ನು (ಮೈಕ್ರೋ ನೀಡಲ್ಸ್) ಆವಿಷ್ಕರಿಸಿದ್ದಾರೆ. ಈ ಸೂಜಿಗಳು ಚರ್ಮಕ್ಕೆ ಸ್ವಲ್ಪವೂ ನೋವು ಮಾಡುವುದಿಲ್ಲ. ಆದರೆ, ಸಾಂಪ್ರದಾಯಿಕ ಸೂಜಿಗಳಷ್ಟೇ ಸಮರ್ಥವಾಗಿ ಔಷಧವನ್ನು ದೇಹಕ್ಕೆ ಕಳಿಸಬಲ್ಲವು. ಇದಕ್ಕೆ ನೋ- ಪ್ರಿಕ್ಲಿ ಪ್ಯಾಚ್‌ ( ಚುಚ್ಚದಿರುವ ಪ್ಯಾಚ್‌) ಎಂದು ಹೆಸರಿಸಿದ್ದಾರೆ.

ನೋ ಪ್ರಿಕ್ಲಿ ಪ್ಯಾಚ್‌ ಪಾಲಿಮರ್‌ನಿಂದ ತಯಾರಿಸಿದ ಸೂಕ್ಷವಾದ ಹಲವಾರು ಸೂಜಿಗಳನ್ನು ಹೊಂದಿರುತ್ತದೆ. ಈ ಸೂಜಿಗಳು ಬರಿಗಣ್ಣಿಗೆ ಕಾಣದಷ್ಟು ಸೂಕ್ಷ್ಮವಾಗಿರುತ್ತವೆ. ಇವು ಔಷಧವನ್ನು ಚರ್ಮದಡಿಯ ಸೂಕ್ಷ್ಮ ರಕ್ತನಾಳಗಳಿಗೆ ಕಳುಹಿಸುತ್ತವೆ. ಔಷಧವನ್ನು ದೇಹದೊಳಗೆ ಕಳಿಸಿದ ಕೆಲವೇ ನಿಮಿಷಗಳಲ್ಲಿ ಸೂಕ್ಷ್ಮ ಪಾಲಿಮರ್‌ ಸೂಜಿಗಳು ಕರಗಿ ಹೋಗುತ್ತವೆ. ಇದು ಬಳಕೆದಾರ ಸ್ನೇಹಿಯಾಗಿದ್ದು, ಸಾಂಪ್ರದಾಯಿಕ ಸೂಜಿಗಿಂತಲೂ ಸುಲಭವಾಗಿ ಉಪಯೋಗಿಸಬಹುದು. ಜತೆಗೆ ಈ ಪ್ಯಾಚ್‌ ಬಳಕೆಯಿದ ಮಕ್ಕಳಲ್ಲಿ ಸೂಜಿ ಚುಚ್ಚಿಸಿಕೊಳ್ಳುವ ಭಯ ಹತ್ತಿರವೂ ಸುಳಿಯದು.

ಪ್ರಸ್ತುತ ಚುಚ್ಚುಮದ್ದು ನೀಡಲು ಲೋಹದ ಸೂಕ್ಷ್ಮ ಸೂಜಿಗಳನ್ನು ಬಳಸಲಾಗುತ್ತಿದೆ. ಆದರೆ ನಾವು ಪಾಲಿಮರ್‌ ಆಧಾರಿತ ಔಷಧ ಸಾಗಾಣಿಕಾ ಸಾಧನವನ್ನು ಅಭಿವೃದ್ಧಿಪಡಿಸಿದ್ದೇವೆ. ಇದು ಕ್ರಿಮಿಶುದ್ಧೀಕರಣ, ವಿಲೇವಾರಿ ಮತ್ತು ಮರುಬಳಕೆ ಮೊದಲಾದ ವೈದ್ಯಕೀಯ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ಮಕ್ಕಳು ಮತ್ತು ನಿಯಮಿತವಾಗಿ ಚುಚ್ಚುಮದ್ದು ತೆಗೆದುಕೊಳ್ಳುವ ವಯಸ್ಕರಿಗೂ ಇದು ವರದಾನವಾಗಿದೆ ಎಂದು ಸಂಶೋಧನಾ ತಂಡದ ಮುಖ್ಯಸ್ಥ ಡಾ.ವಿರಳ್‌ ಷಾ ಹೇಳಿದ್ದಾರೆ. ನೋ ಪ್ರಿಕ್ಲಿ ಪ್ಯಾಚನ್ನು ಈಗಾಗಲೇ ಪ್ರಾಣಿಗಳ ಮೇಲೆ ಪ್ರಯೋಗಿಸಿದ್ದು, ಯಶಸ್ವಿಯಾಗಿದೆ. ಈ ಕುರಿತಂತೆ ಜರ್ನಲ್‌ ಆಫ್‌ ಅಮೆರಿಕನ್‌ ಅಸೋಸಿಯೇಷನ್‌ ಆಫ್‌ ಫಾರ್ಮಾಸುಟಿಕಲ್‌ ಸೈಂಟಿಸ್ಟ್‌ ನಿಯತಕಾಲಿಕೆಯಲ್ಲಿ ಸಂಶೋಧನಾ ಲೇಖನ ಪ್ರಕಟಗೊಂಡಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ