ಸುದ್ದಿ

ಅಸ್ಸಾಂನ 700 ಹಳ್ಳಿ ಜಲಾವೃತ-ಅಪಾಯದ ತುದಿ ಮೀರಿ ಹರಿಯುತ್ತಿರೋ ಬ್ರಹ್ಮಪುತ್ರ…..ಜನ ಜೀವನ ಅಸ್ತ ವ್ಯಸ್ತ….!

200

ಮಳೆರಾಯನ ಆರ್ಭಟಕ್ಕೆ ಬ್ರಹ್ಮಪುತ್ರ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಅಸ್ಸಾಂನಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 17 ಜಿಲ್ಲೆಗಳ 700 ಹಳ್ಳಿಗಳು ಜಲಾವೃತವಾಗಿದ್ದು, ಸುಮಾರು 4 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಭಾರೀ ಭೂಕುಸಿತ ಮುಂದುವರಿದಿದ್ದು, ಮೂರು ಜನರು ಸಾವನ್ನಪ್ಪಿದ್ದಾರೆ. ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಜೋರ್ಹತ್, ದಾರಂಗ್, ಬಾರ್ಪೆಟಾ, ನಲ್ಬಾರಿ, ಮಜುಲಿ, ಚಿರಾಂಗ್, ದಿಬ್ರುಗರ್ಹ್ ಮತ್ತು ಗೋಲಘಾಟ್ ಸೇರಿದಂತೆ ಒಟ್ಟು 17 ಜಿಲ್ಲೆಗಳ 700 ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಸುಮಾರು ನಾಲ್ಕು ಲಕ್ಷ ಜನರ ಮೇಲೆ ಪ್ರವಾಹ ಪರಿಣಾಮ ಬೀರಿದೆ ಎನ್ನಲಾಗಿದೆ.

ನದಿ ನೀರು ನಿರ್ದಿಷ್ಠ ಮಟ್ಟವನ್ನು ತಲುಪಿದ್ದು, ಒಂದೆರಡು ದಿನಗಳಲ್ಲಿ ಅಪಾಯದ ಮಟ್ಟವನ್ನು ದಾಟಬಹುದು ಎಂದು ಒಳನಾಡಿನ ಜಲಮಾರ್ಗ ಪ್ರಾಧಿಕಾರದ ವಿಭಾಗ ಅಧಿಕಾರಿ ವಿ. ಗಾಂಧಿಯಾ ಅವರು ತಿಳಿಸಿದ್ದಾರೆ.ಡಿಖೋವ್, ಧನ್ಸಿರಿ, ಜಿಯಾ ಭಾರಲಿ, ಪುತಿಮರಿ ಮತ್ತು ಬೆಕಿ ನದಿಗಳು ಕೂಡ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಜೋರ್ಹತ್‍ನ ನಿಮತಿ ಘಾಟ್‍ನಲ್ಲಿ ನದಿ ಈಗಾಗಲೇ ತುಂಬಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುವಾಹಟಿ ಸಮೀಪದ ದೀಪರ್ ಬಿಲ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಎರಡು ಮನೆಗಳು ನಾಶವಾಗಿದ್ದು, ಓರ್ವ ವ್ಯಕ್ತಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಪ್ರವಾಹದಿಂದಾಗಿ ಜುಲೈ 10 ರಂದು ಸಂಜೆ 5 ಗಂಟೆಯ ಹೊತ್ತಿಗೆ ಒಟ್ಟು 13,267.74 ಹೆಕ್ಟೇರ್ ಬೆಳೆ ಪ್ರದೇಶ ನಾಶವಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‍ಡಿಎಂಎ) ವರದಿ ಮಾಡಿದೆ.

ರಾಜ್ಯದಲ್ಲಿ ಮಳೆ ನಿರಂತರವಾಗಿ ಹೆಚ್ಚಾಗಲಿದ್ದು ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಜಿಲ್ಲೆಗಳಲ್ಲಿನ ಪ್ರವಾಹ ಪರಿಸ್ಥಿತಿಗೆ ತಕ್ಷಣ ಸ್ಪಂದಿಸಲು 24*7 ನಿಯಂತ್ರಣ ಕೊಠಡಿಗಳನ್ನು ಸಕ್ರಿಯಗೊಳಿಸುವಂತೆ ಅಸ್ಸಾಂ ಸಿಎಂ ಸೂಚಿಸಿದ್ದಾರೆ. ಜೊತೆಗೆ ಜಿಲ್ಲಾ ಆಸ್ಪತ್ರೆಗಳಲ್ಲಿನ ಔಷಧಿಗಳ ದಾಸ್ತಾನು ನವೀಕರಿಸಲು ಮತ್ತು ವೈದ್ಯರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಜಿಲ್ಲಾ ಆಯುಕ್ತರಿಗೆ ಸಿಎಂ ಸೂಚಿಸಿದ್ದಾರೆ.

ಪ್ರವಾಹ ಕೇವಲ ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳ ಮೇಲೂ ಪರಿಣಾಮ ಬೀರಿದ್ದು, ಬ್ರಹ್ಮಪುತ್ರದಿಂದ ಬರುವ ಪ್ರವಾಹದ ನೀರು ಕಾಜಿರಂಗ ರಾಷ್ಟ್ರೀಯ ಉದ್ಯಾನದ ಕೆಲವು ಭಾಗಗಳನ್ನು ಪ್ರವೇಶಿಸಿದ್ದು, ಪ್ರಾಣಿಗಳು ತಮ್ಮ ಜೀವ ರಕ್ಷಣೆಗಾಗಿ ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ. ಸದ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‍ಡಿಆರ್‍ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‍ಡಿಆರ್‍ಎಫ್) ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ ಸೂಕ್ತ ಕ್ರಮ ಕೈಗೊಂಡಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ