ರಾಜ್ಯದ 58 ಸಾವಿರ ಜನ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ವಾಸಿಸುವವನೇ ಮನೆಯೊಡೆಯ ಎಂಬ ಹಕ್ಕು ನೀಡುವ ಕ್ರಾಂತಿಕಾರಿ ಕರ್ನಾಟಕ ಭೂಸುಧಾರಣೆ ಕಾಯ್ದೆಗೆ ರಾಷ್ಟ್ರಪತಿಗಳು ಕೊನೆಗೂ ಅಂಕಿತ ಹಾಕಿದ್ದಾರೆ.
ರಾಷ್ಟ್ರಪತಿಯವರಿಂದ ವಾಸಿಸುವವನೇ ಮನೆ ಒಡೆಯ ಯೋಜನೆಗೆ ಅಂಕಿತ ಜಾರಿ:-

ವಾಸಿಸುವವನೇ ಮನೆ ಒಡೆಯ ಎಂಬ ಐತಿಹಾಸಿಕ ಕಾಯ್ದೆ ಜಾರಿಗೆ ರಾಷ್ಟ್ರಪತಿಯವರ ಅಂಕಿತ ವಷ್ಟೇ ಬಾಕಿ. ಭೂ ಸುಧಾರಣೆಗಳ ತಿದ್ದುಪಡಿ ಕಾಯ್ದೆಯಲ್ಲಿ ‘ಯಾವುದೇ ಇತರ ಕಾನೂನು ಏನೇ ಇದ್ದರೂ, 1979ರ ಜನವರಿ ಮೊದಲ ದಿನಕ್ಕೆ ನಿಕಟಪೂರ್ವದಲ್ಲಿ ಯಾವುದೇ ಕೃಷಿ ಕಾರ್ಮಿಕನು, ಯಾವುದೇ ಗ್ರಾಮದಲ್ಲಿ ತನಗೆ ಸೇರಿರದ ಭೂಮಿಯಲ್ಲಿರುವ ವಾಸದ ಮನೆಯಲ್ಲಿ ಸಾಮಾನ್ಯವಾಗಿ ವಾಸಿಸುತ್ತಿದ್ದಲ್ಲಿ, ಅಂಥ ವಾಸದ ಮನೆಯನ್ನು, ಅದು ಇರುವ ನಿವೇಶನದ ಸಹಿತವಾಗಿ ಮತ್ತು ಅದಕ್ಕೆ ನಿಕಟವಾಗಿ ತಾಗಿಕೊಂಡಿರುವ ಮತ್ತು ಅದರ ಅನುಭೋಗಕ್ಕೆ ಅವಶ್ಯವಾಗಿರುವ ಭೂಮಿಯು ಅದರ ಮಾಲೀಕನಾಗಿ ನೋಂದಾಯಿಸಿಕೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದು’ ಎಂದು ಹೇಳಿದೆ.

ಅಂದರೆ, ದಾಖಲೆಗಳಿಲ್ಲದಿದ್ದರೂ, ಕೃಷಿ ಕಾರ್ಮಿಕ 1979ರ ಜನವರಿಗೂ ಪೂರ್ವದಲ್ಲಿ ತಾನು ವಾಸವಾಗಿರುವ ಮನೆ ಮತ್ತು ಅದಕ್ಕೆ ಹೊಂದಿಕೊಂಡ ಕನಿಷ್ಠ ಬಳುವಳಿಯ ಭೂಮಿಯು ಆತನದ್ದೇ ಎಂಬುದನ್ನು ಕಾಯ್ದೆ ಹೇಳುತ್ತದೆ.ಈ ಬಗ್ಗೆ ಶಾಸಕ ಕೆ.ಶಿವಮೂರ್ತಿ ನಾಯಕ್ ನೇತೃತ್ವದ ನಿಯೋಗ ಹಿಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿ ಮಾಡಿ, ವಿಧೇಯಕಕ್ಕೆ ಒಪ್ಪಿಗೆ ನೀಡುವಂತೆ ಮನವಿಯನ್ನೂ ಮಾಡಿದ್ದರು

ರಾಜ್ಯದ 58 ಸಾವಿರ ಜನವಸತಿಗಳಾದ ಗೊಲ್ಲರ ಹಟ್ಟಿ, ಲಂಬಾಣಿ ತಾಂಡಾ, ವಡ್ಡರ ಹಟ್ಟಿ, ಕುರುಬರ ಹಟ್ಟಿ, ನಾಯಕರ ಹಟ್ಟಿ, ಮಜರೆ ಗ್ರಾಮ, ದೊಡ್ಡಿ, ಪಾಳ್ಯ, ಕ್ಯಾಂಪ್, ಗೌಳಿ ದೊಡ್ಡಿ, ಕಾಲೋನಿಯಂತಹ ದಾಖಲೆ ಇಲ್ಲದ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವುದು ಕಾಯ್ದೆಯ ಮುಖ್ಯಉದ್ದೇಶವಾಗಿದೆ.