ಉಪಯುಕ್ತ ಮಾಹಿತಿ

ನಿಮ್ಮ ಮನೆಯಲ್ಲಿ ಗುಲಾಬಿ ಗಿಡಗಳು ಇವೆಯಲ್ಲಾ ಆ ಗಿಡಗಳಿಗೆ ಹೀಗೆ ಕಸಿ ಮಾಡಿದ್ರೆ,ಕೊಂಬೆಗೊಂದೊಂದು ಬಣ್ಣದ ಹೂಗಳು ನಿಮ್ಗೆ ಸಿಗುತ್ತೆ…

2045

ನಿಮ್ಮ ಮನೆಯಲ್ಲಿ ಗುಲಾಬಿ ಗಿಡಗಳು ಇವೆಯಲ್ಲಾ ಆ ಗಿಡಗಳಿಗೆ ಕಸಿ ಮಾಡುವುದರಿಂದ ಕೊಂಬೆಗೊಂದೊಂದು ಬಣ್ಣದ ಹೂಗಳನ್ನೂ ಸಹ ಪಡೆಯಬಹುದು.ಕಸಿ ಎಂದರೆ ನಿಮಗೆ ತಿಳಿಯದ್ದೇನಲ್ಲ ಆದರೆ ಈ ಮೊದಲಿನ ಸಾಂಪ್ರದಾಯಿಕ ಕಸಿ ಪದ್ಧತಿಯಂತೆ ಗಿಡದ ಕೊಂಬೆಯನ್ನೇ ಕತ್ತರಿಸಿ ಮತ್ತೊಂದು ಗಿಡಕ್ಕೆ ಜೋಡಿಸಿದ ನಂತರ ಅದೇನಾದರೂ ನೆಟ್ಟದೆ ಬೆಳೆಯದೆ ಹಳ್ಳ ಹಿಡಿದು ಮಕಾಡೆ ಮಲಗಿತೆಂದರೆ ಸಾಕು .ನಿಮ್ಮ ಹೆಂಡತಿಯಿಂದ “ಅದೇನು ಸೀಮೇಗಿಲ್ಲದ ಗಂಡೂಂತ ಇವನಿಗೆ ಕೊಟ್ಟು ಮದುವೆ ಮಾಡಿದ್ರಪ್ಪಾ ನನ್ನ ಥತ್ “ ಅಂತ ಬೈಯ್ಯಿಸಿಕೊಳ್ಳಬಾರದೆಂದರೆ ನಾ ಹೇಳಿದಂತೆ ಮಾಡಿ.

ಮೊದಲಿಗೆ ನಿಮ್ಮ ಮನೆಯಲ್ಲಿರುವ ಎರಡು ಬೇರೆ ಬೇರೆ ಬಣ್ಣದ ಗುಲಾಬಿ ಹೂ ಬಿಡುವ ಗಿಡಗಳನ್ನು ಆರಿಸಿಕೊಳ್ಳಿ.ಆ ಗಿಡದ ಮೇಲ್ಭಾಗದಲ್ಲಿ ಚಿಗುರುತ್ತಿರುವ ಕಡೆಯಿಂದ ಕೆಳಗೆ ನೋಡುತ್ತಾ ಬಂದರೆ ಅದೇ ಕೊಂಬೆಯಲ್ಲಿ ಮತ್ತೊಂದು ಕಡೆ ಇನ್ನೂ ಚಿಗುರಲು ತಯಾರಾಗುತ್ತಿರುವ ಕೆಂಪು ಬಣ್ಣದ ಗೆಣ್ಣು ಕಾಣುತ್ತದೆಯಲ್ಲಾ ಅದನ್ನು ಗಮನಿಸಿ.

ಈಗ ಮತ್ತೊಂದು ಗಿಡದ ಬಳಿ ಹೋಗಿ ಹಿಂದೆ ನೋಡಿದ ಅದೇ ಬೆಳ್ಳುಳ್ಳಿ ಗಾತ್ರದ ಕೊಂಬೆಗೆ ಒಂದು ಸ್ವಚ್ಚವಾದ ಬ್ಲೇಡ್ ತೆಗೆದುಕೊಂಡು ಕೊಂಬೆ ಉದ್ದವಾಗಿರುವ ಮಾದರಿಯಲ್ಲಿಯೇ ಒಂದು ಸೆಂಟಿಮೀಟರಿನಷ್ಟು ಉದ್ದದ ಗೆರೆ ಎಳೆಯಿರಿ ಅಂದರೆ ನಿಮ್ಮ ಬ್ಲೇಡಿನಿಂದ ಕುಯ್ಯುವುದು ಕೊಂಬೆಯ ಕಾಂಡದ ಒಳಗೆ ಹೋಗುವುದು ಬೇಡ ಮೇಲಿನ ಕಾಂಡದ ಸಿಪ್ಪೆಯನ್ನು ಮೀರುವುದು ಬೇಡ.

ಹೀಗೆ ಉದ್ದಕ್ಕೆ ಕುಯ್ದ ನಂತರ ಆ ಗೆರೆಯ ಮೇಲ್ಭಾಗಕ್ಕೆ ಅಡ್ಡ ಸ್ವಲ್ಪ ಕುಯ್ದುಬಿಡಿ ಅಂದರೆ ಈಗ ನಿಮಗೆ ಅದು ಇಂಗ್ಲೀಷಿನ T ಆಕಾರದಲ್ಲಿ ಕಾಣುತ್ತಿದೆಯಲ್ಲವೇ ? ಅದನ್ನು ನಿಧಾನವಾಗಿ ಸಿಪ್ಪೆ ಬಿಡಿಸಿ .ಈಗ ಅದನ್ನು ಹಾಗೆಯೇ ಬಿಟ್ಟು ಮೊದಲಿನ ಗಿಡದ ಹೊಸದಾದ ಚಿಗುರು ಗಿಣ್ಣಿನ್ನು ನಿಧಾನವಾಗಿ ಮೇಲಿನಿಂದ ಸಿಪ್ಪೆಯ ಅಳತೆಗೆ ಮಾತ್ರ ನಿಧಾನವಾಗಿ ಸೌತೆಕಾಯಿ ಹೆರೆಯುವ ಮಾದರಿಯಲ್ಲಿ ಚಿಗುರು ಗಿಣ್ಣನ್ನು ಮಾತ್ರ ಹೊರ ತೆಗೆಯಿರಿ.

ಹೊರತೆಗೆದ ಚಿಗುರು ಗಿಣ್ಣನ್ನು ತಂದು T ಡಿಸೈನಲ್ಲಿ ಕಟ್ ಮಾಡಿಟ್ಟ ಕಾಂಡದ ಸಿಪ್ಪೆಯೊಳಗೆ ನಿಧಾನವಾಗಿ ಮೇಲಿನಿಂದ ತೂರಿಸಿ ನಂತರ ಆ ಗಿಣ್ಣಿನ ಮೇಲೆ ಕೆಳಗೆ ಗಮ್ ಟೇಪ್ ಸುತ್ತಿ ಬಿಡಿ .ಇದಾದ ನಂತರ ಗಿಡದಲ್ಲಿ ಶೇ 80ರಷ್ಟು ಎಲೆಗಳನ್ನು ಅದೇ ಬ್ಲೇಡಿನಿಂದ ಕತ್ತರಿಸಿ ಹಾಕಿ ಹಾಗೂ ಗಿಡದ ಮೇಲಭಾಗದಲ್ಲಿರುವ ಚಿಗುರನ್ನೂ ಕೂಡ ಕತ್ತರಿಸಿ ಬಿಡಿ.ಇದನ್ನು ಟಿ ಬಡ್ಡಿಂಗ್ ಎಂದು ಕರೆಯುತ್ತಾರೆ.

ನಂತರ ನೀವು ಮೂರ್ನಾಲ್ಕು ದಿನಗಳಲ್ಲಿ ಈ ಹೊಸ ಗಿಣ್ಣು ನಿಧಾನವಾಗಿ ಚಿಗುರಿ ಹೊಸ ಬಣ್ಣದ ಹೂ ಬಿಡಲು ಶುರುವಾಗುತ್ತದೆ.ಈ ವಿಧಾನ ಮೊದಲು ಬಂದದ್ದು ನಿಂಬೆ ಗಿಡದಲ್ಲಿ ಬೇಗನೆ ಕಾಯಿ ಬಿಡಿಸುವುದಕ್ಕೆ ಆ ನಂತರ ಬಹಳಷ್ಟು ಗಿಡಗಳಿಗೆ ಇದೇ ವಿಧಾನವನ್ನು ಇಸ್ರೇಲಿನಲ್ಲಿ ಬಳಸುತ್ತಿದ್ದಾರೆ.

ಈ ತರಹದ ಕಸಿ ಮಾಡುವಾಗ ಒಂದೇ ಕೊಂಬೆಯ ಗಿಡಕ್ಕೆ ಕಸಿ ಮಾಡಿದರೆ ಗರಿಷ್ಠ ಫಲಿತಾಂಶ ಎರಡೂ ಗಿಡದಿಂದ ಪಡೆಯಬಹುದು ಹಾಗೂ ಒಂಟಿ ಕೊಂಬೆಯ ಗಿಡಕ್ಕೆ ಈ ತರಹ ಕಸಿ ಮಾಡಿದ ನಂತರ ಕಸಿ ಮಾಡಿದ ಜಾಗದಿಂದ ಮೂರು ಇಂಚಿನಷ್ಟು ಮೇಲಿನ ಕೊಂಬೆಯನ್ನು ಅರ್ಧಕ್ಕೆ ಕತ್ತರಿಸಿ ಮಡಿಚಿಬಿಡಬೇಕು ಏಕೆಂದರೆ ಮೇಲಿನ ಕೊಂಬೆ ಹಾಗೆಯೇ ಇದ್ದರೆ ಗಿಡ ಪೋಷಕಾಂಶಗಳೆಲ್ಲವೂ ಮೇಲಕ್ಕೆ ಹೋಗಲು ಶುರುವಾಗುವುದರಿಂದ ಕಸಿ ಮಾಡಿದ ಹೊಸ ಚಿಗುರು ಬೇಗ ಬೆಳೆಯುವುದಿಲ್ಲ.

ಹಾಗೂ ಅದನ್ನು ಏಕೆ ಅರ್ಧ ಕತ್ತರಿಸಿ ಹಾಗೆಯೇ ಬಿಡಬೇಕೆಂದರೆ ಈ ಮೊದಲಿನ ಕೊಂಬೆಯು ನೆಲದಿಂದ ಪೋಷಕಾಂಶಗಳನ್ನು ಅತ್ಯುತ್ತಮವಾಗಿ ಮೇಲಕ್ಕೆ ಎಳೆಯುತ್ತಿರುತ್ತದೆ ಹಾಗಾಗಿ ಅದನ್ನು ಪೂರಾ ಕತ್ತರಿಸಿಬಿಟ್ಟರೆ ಪೂಷಕಾಂಶ ಮೇಲೆಕ್ಕೆಳೆಯುವ ಪ್ರಮುಖ ಪಂಪನ್ನೇ ಆಫ್ ಮಾಡಿದಂತಾಗುತ್ತದೆ ಹಾಗಾಗಿ ಅದನ್ನು ಅರ್ಧ ಕತ್ತರಿಸಿ ಮಡಚಿ ಬಿಟ್ಟರೆ ಅದು ಮುಂದೆ ಬಳೆಯುವುದಿಲ್ಲ ಆದರೆ ಪೋಷಕಾಂಶ ಸೆಳೆದು ಹೊಸ ಚಿಗುರಿಗೆ ಕೊಡುತ್ತದೆ ಎಂದಷ್ಟೇ.

ಈ ವಿಧಾನದಲ್ಲಿ ನಿಮ್ಮ ಎರಡೂ ಗಿಡಗಳೂ ಕೂಡ ಹಾಳಾಗುವುದಿಲ್ಲ ಹಾಗೂ ಏಕಕಾಲದಲ್ಲಿ ಎರಡೂ ಗಿಡಗಳಿಗೆ ಕಸಿ ಮಾಡಬಹುದು.ಹಾಗೂ ನಿಮ್ಮ ಹೆಂಡತಿಯು ಗುಲಾಬಿ ಗಿಡಕ್ಕೆ ಕಸಿ ಮಾಡಲು ಒಪ್ಪಿಗೆ ಕೊಡದಿದ್ದರೆ ಪಕ್ಕದ ಮನೆಯ ಆಂಟಿಯ ಗುಲಾಬಿ ಗಿಡಕ್ಕೆ ಆದರೂ ಕಸಿ ಮಾಡಿಬಿಡಿ !
ನಾಳೆದಿನ ಬಿಡುವ ಚಿತ್ರಾವಿಚಿತ್ರ ಬಣ್ಣದ ಗುಲಾಬಿ ಹೂ ನೋಡಿ ಹೊಟ್ಟೆ ಉರಿದುಕೊಳ್ಳಲಿ !

ಕೃಪೆ:ಉಮೇಶ್ ಆಚಾರ್

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ