ಕರ್ನಾಟಕ ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮೇ.೧೦ ಬುಧವಾರ ಚುನಾವಣೆ ನಡೆಯಲಿದ್ದು, ಮೇ.೧೩ ಶನಿವಾರ ಮತಗಳ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಚುನಾವಣಾ ಆಯೋಗವು ಬುಧವಾರ ಈ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ್ದು, ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಇಂದಿನಿಂದಲೇ ತಕ್ಷಣ ಜಾರಿಗೆ ಬರುವಂತೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತಿದೆ.
ಚುನಾವಣಾ ವೇಳಾಪಟ್ಟಿಯು ಏಪ್ರಿಲ್ ೧೩ ರಂದು ಚುನಾವಣಾ ಅಧಿಸೂಚನೆ ಅಧಿಕೃತವಾಗಿ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆ ಕಾರ್ಯವು ಅಂದಿನಿಂದಲೂ ಆರಂಭವಾಗುತ್ತದೆ.
ನಾಮಪತ್ರ ಸಲ್ಲಿಕೆಗೆ ಏಪ್ರಿಲ್ ೨೦ ಕೊನೆಯ ದಿನವಾಗಿದ್ದು, ಏಪ್ರಿಲ್ ೨೧ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ನಾಮಪತ್ರಗಳ ವಾಪಸ್ ಪಡೆಯಲು ಏಪ್ರಿಲ್ ೨೪ ರಂದು ಅಂತಿಮ ದಿನವಾಗಿದ್ದು, ನಂತರ ಅಂತಿಮವಾಗಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಲಾಗುತ್ತದೆ.
ನಾಮಪತ್ರಗಳ ವಾಪಸಾತಿಯಿಂದ ಹದಿನೈದು ದಿನಗಳ ಕಾಲ ಪ್ರಚಾರ ಕಾರ್ಯಕ್ಕಾಗಿ ಮೀಸಲಿಡಲಾಗಿದ್ದು, ಮೇ.೧೦ ರಂದು ಬುಧವಾರ ಮತದಾನ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ.
ಮೇ.೧೩ ರಂದು ಮತಗಳ ಎಣಿಕೆ ನಡೆದು ಅಂದು ಮಧ್ಯಾಹ್ನದ ವೇಳೆಗೆ ರಾಜ್ಯದ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ.
ಇಂದಿನಿಂದಲೂ ಚುನಾವಣಾ ನೀತಿಸಂಹಿತೆ ಜಾರಿಗೆ ಬಂದಿರುವುದರಿಂದ ಸರಕಾರಿ ವಾಹನ ಬಳಸಲು ನಿರ್ಬಂಧ ವಿಧಿಸಲಾಗಿದೆ. ಸರಕಾರಿ ಕಟ್ಟಡಗಳ ಬಳಕೆಗೂ ನಿರ್ಬಂಧವಿದ್ದು, ಚುನಾವಣಾ ಆಯೋಗದ ಅನುಮತಿಯನ್ನು ಪಡೆದ ನಂತರವೇ ಪ್ರಚಾರಕಾರ್ಯ, ಸಭೆ, ಸಮಾರಂಭಗಳನ್ನು ನಡೆಸಬಹುದಾಗಿದೆ.
