ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಒಂದೆನಿಸಿರುವ ಅಮರನಾಥ ಯಾತ್ರೆಗೆ ತೆರಳಿದ್ದ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಉಗ್ರರ ನಿರಂತರ ದಾಳಿಯಿಂದ ನಲುಗಿರೋ ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ರಾತ್ರಿ ಉಗ್ರರು ನಡೆಸಿದ ಬೀಭತ್ಸ ಕೃತ್ಯಕ್ಕೆ 7 ಮಂದಿ ಅಮರನಾಥ ಯಾತ್ರಿಗಳು ಬಲಿಯಾಗಿದ್ದಾರೆ.

ಕಾಶ್ಮೀರದಲ್ಲಿ ಉದ್ವಿಗ್ನ ವಾತಾವರಣ ಇರುವ ಹಿನ್ನಲೆಯಲ್ಲಿ ಉಗ್ರರು ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದಾರೆಂದು ಕೆಲ ದಿನಗಳ ಹಿಂದಷ್ಟೇ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಸೋಮವಾರ ರಾತ್ರಿ 8.30ರ ಸುಮಾರಿಗೆ ಅನಂತನಾಗ್ ಜಿಲ್ಲೆಯ ಖನಬಾಲ್ನದಲ್ಲಿ ಪೊಲೀಸರನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ 6 ಮಹಿಳೆಯರು ಸೇರಿದಂತೆ ಬಸ್ನಲಲ್ಲಿದ್ದ 7 ಮಂದಿ ಅಮರನಾಥ ಯಾತ್ರಿಕರು ಬಲಿಯಾಗಿದ್ದು, 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದ ಹಿನ್ನಲೆಯಲ್ಲಿ ಯಾತ್ರೆಗೆ ಭಾರೀ ಭದ್ರತೆಯನ್ನು ಒದಗಿಸಲಾಗಿತ್ತು. ಭದ್ರತೆಗಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜತೆಗೆ 40 ಸಾವಿರ ಅರೆ ಮಿಲಿಟರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಅಲ್ಲದೆ, ಉಪಗ್ರಹ ವ್ಯವಸ್ಥೆ, ಡ್ರೋನ್ ಕಣ್ಗಾವಲು ಇಡಲಾಗಿತ್ತು. ಭಾರೀ ಭದ್ರತೆಯ ನಡುವೆಯೂ ಉಗ್ರರು ದಾಳಿ ನಡೆಸಿರುವುದು ಜನರಲ್ಲಿರುವ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಅಮರನಾಥ ಯಾತ್ರೆ ಮುಗಿಸಿ ಮರಳುತ್ತಿರುವಾಗ ಈ ಕೃತ್ಯ ನಡೆದಿದೆ. ಉಗ್ರರ ದಾಳಿಗೆ ತುತ್ತಾದ ಗುಜರಾತ್ ನೋಂದಣಿಯ ಬಸ್ ಅಮರನಾಥ ದೇಗುಲದ ಬೋರ್ಡ್ನೊಂ ದಿಗೆ ರಿಜಿಸ್ಟರ್ ಮಾಡಿಕೊಂಡಿರಲಿಲ್ಲ. ರಾತ್ರಿ 7ರ ನಂತರ ಭದ್ರತೆ ವಾಪಸ್ ಪಡೆದಿದ್ದ ಹಿನ್ನೆಲೆಯಲ್ಲಿ ಪ್ರಯಾಣಕ್ಕೆ ಅವಕಾಶ ಇರಲಿಲ್ಲ. ಆದರೂ ಬಸ್ ಡ್ರೈವರ್ ನಿಯಮ ಮೀರಿ ಬಸ್ ಚಲಾಯಿಸಿದ್ದ.

ಜಮ್ಮುವಿನಿಂದ ಅಮರನಾಥ ದೇಗುಲ 200 ಕಿಲೋ ಮೀಟರ್ ದೂರದಲ್ಲಿದೆ. ಅಮರನಾಥ ಯಾತ್ರೆಯ ದಾರಿಯಲ್ಲಿ 40 ಸಾವಿರ ಭದ್ರತಾ ಪಡೆಗಳನ್ನ ನಿಯೋಜಿಸಲಾಗಿತ್ತು. ಗುಪ್ತಚರ ಇಲಾಖೆಯ ಮಾಹಿತಿಯಂತೆ ಉಗ್ರರು ಸುಮಾರು 150 ಯಾತ್ರಿಕರು ಹಾಗೂ 200 ಪೊಲೀಸರನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಇನ್ನು ಉಗ್ರರ ದಾಳಿ ಹಿನ್ನಲೆಯಲ್ಲಿ ಅಮರನಾಥ ಯಾತ್ರೆಯನ್ನು ಮುಂದೂಡಲಾಗಿದೆ ಎಂಬ ಗುಮಾನಿಗಳು ಕೇಳಿಬರತೊಡಗಿವೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಸರ್ಕಾರ ಮಾಹಿತಿಯನ್ನು ನೀಡಿಲ್ಲ. ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮರನಾಥ ಯಾತ್ರಿಕರ ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಸಿಎಂ ಮೆಹಬೂಬಾ ಮುಫ್ತಿ ಅನಂತ್ನಾ7ಗ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಇದು ಪ್ರತಿಯೊಬ್ಬ ಕಾಶ್ಮೀರಿ ತಲೆತಗ್ಗಿಸುವಂತ ಕೃತ್ಯ. ಇದು ಕೇವಲ ನಮ್ಮ ಅತಿಥಿಗಳ ಮೇಲೆ ನಡೆದ ಭಯಂಕರ ದಾಳಿಯಲ್ಲ. ಇಡೀ ಕಾಶ್ಮೀರ ಹಾಗೂ ಕಾಶ್ಮೀರಿಯತ್ ಮೇಲೆ ನಡೆದ ಲಜ್ಜೆಗೆಟ್ಟ ದಾಳಿ. ಉಗ್ರರನ್ನ ಶಿಕ್ಷಿಸದೇ ಬಿಡೋದಿಲ್ಲ ಅಂತಾ ಗುಡುಗಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಹೇಡಿಗಳ ಪೈಶಾಚಿಕ ಕೃತ್ಯಕ್ಕೆ ಭಾರತ ತಲೆಬಾಗೋದಿಲ್ಲ ಎಂದು ಗುಡುಗಿದ್ದಾರೆ.