ಕಣ್ಣಿನ ಸುತ್ತಲು ಕಪ್ಪು ವರ್ತುಲಗಳು ಕಾಡುವುದು ಎಲ್ಲಾ ವಯಸ್ಸಿನವರಲ್ಲೂ ಕಂಡುಬರುವುದು ಸಾಮಾನ್ಯ.
ಕಣ್ಣಿನ ಸುತ್ತ ಉಂಟಾಗುವ ಕಪ್ಪು ವರ್ತುಲಗಳು ಮುಖದ ಸೌಂದರ್ಯ ಹಾಳು ಮಾಡುತ್ತವೆ ಹಾಗೂ ಕಿರಿ ಕಿರಿ ಕೂಡ. ಮೇಕಪ್‌ನಿಂದ ಇವುಗಳನ್ನು ಮುಚ್ಚಿದರೆ ಅದು ತಾತ್ಕಾಲಿಕ ಉಪಶಮನವಷ್ಟೇ ಆಗಬಲ್ಲದು. ‘ಕಪ್ಪು ವರ್ತುಲಗಳಿಂದ ಶಾಶ್ವತ ಮುಕ್ತಿ ಪಡೆಯಲು ಸಾಧ್ಯವಿಲ್ಲವೇ ಅಂತ ನಿಮ್ಗೆ ಅನ್ನಿಸಬಹುದು.

ಇದಕ್ಕೆ ಮುಖ್ಯ ಕಾರಣಗಳು:-
ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಎಂಬುದಕ್ಕಿಂತ ಹೆಚ್ಚಾಗಿ ದೇಹ ನಿಶ್ಶಕ್ತವಾದಾಗ ಮತ್ತು ರಕ್ತಹೀನತೆಯುಂಟಾದಾದಾಗ ಆರಂಭವಾಗುವ ಸಮಸ್ಯೆ. ದೇಹಕ್ಕೆ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ಉಂಟಾದಾಗ ದೇಹಕ್ಕೆ ಮತ್ತಷ್ಟು ಪೋಷಕಾಂಶ ಬೇಕು ಎಂಬ ಸಂದೇಶವನ್ನು ಕಪ್ಪು ವರ್ತುಲ ನೀಡುತ್ತದೆ. ನಿದ್ರಾಹೀನತೆಯಿಂದ ಬಳಲುವವರಲ್ಲೂ ಈ ಸಮಸ್ಯೆ ಕಾಣಬಹುದು.

ಈ ಸಮಸ್ಯೆಯ ಪರಿಹಾರಕ್ಕೆ ಈಗಾಗಲೇ ಹಲವು ಕ್ರೀಮುಗಳು ಲಭ್ಯವಿವೆ. ಆದರೆ ಇವು ತಾತ್ಕಾಲಿಕವಾಗಿ ಕಪ್ಪು ವರ್ತುಲವನ್ನು ಹೋಗಲಾಡಿಸಿಯಾವೇ ಹೊರತು ಇದಕ್ಕೊಂದು ಶಾಶ್ವತ ಪರಿಹಾರಬೇಕೆಂದರೆ ನಮ್ಮ ಆಹಾರಕ್ರಮದಲ್ಲಿ ಬದಲಾವಣೆ ತಂದುಕೊಳ್ಳುವುದು ಬಹಳ ಮುಖ್ಯ.
ಕಪ್ಪು ವರ್ತುಲಗಳು ಗಂಭೀರ ಸಮಸ್ಯೆಯಲ್ಲ. ಮನೆಯಲ್ಲೇ ಗೃಹೌಷಧಿಗಳಿಂದ ಕಪ್ಪು ವರ್ತುಲಗಳನ್ನು ನಿವಾರಣೆ ಮಾಡಿ ಮೊಗದ ಸೌಂದರ್ಯ ಮತ್ತು ಆರೋಗ್ಯವನ್ನು ವರ್ಧಿಸಬಹುದು.

- ಆದಷ್ಟು ಹೆಚ್ಚು ಹಸಿ ತರಕಾರಿಗಳನ್ನು ಸೇವಿಸಿ.
- ಸೊಪ್ಪಿನಿಂದ ತಯಾರಿಸಲಾದ ಪದಾರ್ಥಗಳನ್ನು ಸೇವಿಸುವುದು ಸಹ ಒಳ್ಳೆಯದು.
- ಆಯಾ ಕಾಲದಲ್ಲಿ ಸಿಗುವ ಹಣ್ಣುಗಳನ್ನು ಸೇವಿಸಿ.
- ಪ್ರತಿದಿನವೂ ರಾತ್ರಿ ಮಲಗುವ ಮೊದಲು 2-4 ಬಾದಾಮಿ ಬೀಜವನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಸೇವಿಸಿ. ಬಾದಾಮಿಯಲ್ಲಿ ಹೆಚ್ಚು ಪೋಷಕಾಶವಿರುವುದರಿಂದ ಇದು ಕಪ್ಪು ವರ್ತುಲವನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ, ಚರ್ಮಕ್ಕೂ ಹೊಳಪು ನೀಡುತ್ತದೆ.
- ದೇಹದಲ್ಲಿ ಬಿಳಿ ರಕ್ತಕಣವನ್ನು ಹೆಚ್ಚಿಸುವಂಥ ಆಹಾರ ಸೇವಿಸಿ. ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವೂ ಕಡಿಮೆಯಿದ್ದರೆ ಕಪ್ಪುವರ್ತುಲ ಕಾಣಿಸಿಕೊಳ್ಳುತ್ತದೆ ಇದಕ್ಕಾಗಿ ಯಾವುದೇ ರೀತಿಯ ವೈದ್ಯಕೀಯ ಉಪಚಾರಗಳ ಅಗತ್ಯವಿಲ್ಲ. ಪ್ರತಿದಿನವೂ ತಿನ್ನುವ ಆಹಾರದ ಪ್ರಮಾಣವನ್ನೇ ಹೆಚ್ಚಿಸಿ.
- ನಾಲಿಗೆಗೆ ರುಚಿ ಅನ್ನಿಸುವ ಆರೋಗ್ಯಕ್ಕಿಂತ ಯಾವುದು ದೇಹಕ್ಕೆ ಹಿತವೋ ಅದನ್ನೇ ಸೇವಿಸಿ.
- ಕಪ್ಪು ವರ್ತಲ ಹೋಗಲಾಡಿಸುವುದಕ್ಕಾಗಿ ದುಬಾರಿ ಕ್ರೀಮುಗಳನ್ನು ಬಳಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದೂ ಅಲ್ಲದೆ, ಇದರಿಂದ ಅಡ್ಡಪರಿಣಾಮ ಉಂಟಾಗಬಹುದು. ಒಣಹಣ್ಣುಗಳಾದ ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಮುಂತಾದವುಗಳ ಸೇವನೆಯಿಂದ ದೇಹ ಶಕ್ತಿಯುತವಾಗುತ್ತದೆ. ಇವು ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುವುದಕ್ಕೆ ಸಹಕಾರಿಯಾಗಿವೆ.

- ನಿಮಗೆ ಚರ್ಮದ ಸಮಸ್ಯೆಯಿಂದಲೇ ಕಪ್ಪು ವರ್ತುಲ ಆರಂಭವಾಗಿದೆ ಅನ್ನಿಸಿದರೆ ಹಸಿ ಸೌತೆ ಕಾಯಿ ಅಥವಾ ಆಲೂಗಡ್ಡೆಯನ್ನು ವೃತ್ತಾಕಾರದಲ್ಲಿ ಹೆಚ್ಚಿಕೊಂಡು ಹದಿನೈದು ನಿಮಿಷ ಕಣ್ಣಿನ ಮೇಲೆ ಇಟ್ಟುಕೊಳ್ಳಿ.
- ಪಪ್ಪಾಯ ಹಣ್ಣಿನ ರಸವನ್ನು ಕಣ್ಣಿನ ಸುತ್ತ ಹಚ್ಚಿಕೊಂಡರೂ ಒಳ್ಳೆಯದು.