ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರೂವರೆ ವರ್ಷದಲ್ಲಿ ಪ್ರಚಾರಕ್ಕಾಗಿ 3,755 ಕೋಟಿ ರೂಪಾಯಿ ವ್ಯಯಿಸಿದೆ ಎಂಬ ವಿಚಾರ ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಯಿಂದ ಬಯಲಿಗೆ ಬಂದಿದೆ.

ಮೋದಿ ಸರ್ಕಾರ 2014ರ ಏಪ್ರಿಲ್‌ನಿಂದ 2017ರ ಅಕ್ಟೋಬರ್‌ವರೆಗೆ ಪ್ರಚಾರಕ್ಕಾಗಿಯೇ ಬರೋಬ್ಬರಿ 37,54,06,23,616 ರೂಪಾಯಿ ವ್ಯಯಿಸಿದೆ. ವಿದ್ಯುನ್ಮಾನ, ಮುದ್ರಣ ಮತ್ತು ಇತರ ಸಾರ್ವಜನಿಕ ಪ್ರಚಾರದ ಜಾಹೀರಾತಿಗಾಗಿ ಇಷ್ಟು ಮೊತ್ತದ ಹಣ ವ್ಯಯ ಮಾಡಲಾಗಿದೆ ಎಂದು ಆರ್‌ಟಿಐ ಅಡಿ ಸಲ್ಲಿಸಿದ ಅರ್ಜಿಗೆ ಸರ್ಕಾರವೇ ಉತ್ತರಿಸಿದೆ.

ಗ್ರೇಟರ್ ನೋಯ್ಡಾ ಮೂಲದ ಸಾಮಾಜಿಕ ಕಾರ್ಯಕರ್ತ ರಾಮ್‌ವೀರ್ ತನ್ವರ್ ಎಂಬುವವರು ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಉತ್ತರಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಕೇಂದ್ರ ಸರ್ಕಾರ ಮೂರೂವರೆ ವರ್ಷದಲ್ಲಿ ವಿದ್ಯುನ್ಮಾನ, ರೇಡಿಯೋ, ಡಿಜಿಟಲ್ ಸಿನಿಮಾ, ಇಂಟರ್‌ನೆಟ್, ಎಸ್‌ಎಂಎಸ್‌ಗಳಿಗೆ 1,666 ಕೋಟಿ ರೂಪಾಯಿಗೂ ಅಧಿಕ ಹಣ ವೆಚ್ಚ ಮಾಡಿದೆ.

ಮುದ್ರಣ ಮಾಧ್ಯಮದಲ್ಲಿ ಪ್ರಚಾರಕ್ಕಾಗಿ 1,698 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವ್ಯಯಿಸಿದೆ ಎಂದು ಮಾಹಿತಿ ನೀಡಿದೆ.

ಜೊತೆಗೆ ಸಾರ್ವಜನಿಕ ಪೋಸ್ಟರ್‌ಗಳು, ಬುಕ್ಲೆಟ್‌ಗಳು, ಕ್ಯಾಲೆಂಡರ್‌ಗಳಿಗಾಗಿ 399 ಕೋಟಿ ರೂಪಾಯಿಗೂ ಅಧಿಕ ಹಣ ವೆಚ್ಚ ಮಾಡಲಾಗಿದೆ ಎಂದು ಆರ್‌ಐಟಿ ಅರ್ಜಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಉತ್ತರಿಸಿದೆ.
