ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸುತ್ತಿದ್ದ ಮುಂಬೈ ಇಂಡಿಯನ್ಸ್ ತಂಡದ ಜೋಸ್ ಬಟ್ಲರ್, ಮೈ ಒರಸುವ ಬಟ್ಟೆಯನ್ನು ಕಿತ್ತೆಸೆದು ಬೆತ್ತಲೆಯಾಗಿ ಕುಣಿದು ಸಂಭ್ರಮಿಸಿದ ವಿಡಿಯೊವನ್ನು ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜೂನ್ 1 ರಿಂದ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದ್ದು, ಸ್ವದೇಶಕ್ಕೆ ಮರಳಿದ್ದ ಕಾರಣ ಮುಂಬೈ ತಂಡ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಫೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದರು. ಟಿವಿಯಲ್ಲಿ ಫೈನಲ್ ಪಂದ್ಯದ ಕೊನೆಯ ಓವರ್ ವೀಕ್ಷಿಸುತ್ತಿದ್ದ ಬಟ್ಲರ್ ಮುಂಬೈ ಗೆಲುವು ಪಡೆಯುತ್ತಿದ್ದಂತೆ ವಸ್ತ್ರ ಕಳಚಿ ಕುಣಿದಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಭಾನುವಾರ ಹೈದರಾಬಾದ್‌ನ ರಾಜೀವ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಹಣಾಹಣೆಯಲ್ಲಿ ಮುಂಬೈ ಇಂಡಿಯನ್ಸ್ – ರೈಸಿಂಗ್ ಪುಣೆ ತಂಡಗಳು ಮುಖಾಮುಖಿಯಾದವು.
ಐಪಿಎಲ್ 10ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 129 ರನ್ ಗಳಿಸಿತ್ತು. ಆದರೆ ಈ ಸಾಧಾರಣ ಮೊತ್ತವನ್ನು ಸಮರ್ಥಿಸಿಕೊಂಡ ಎಲ್ಲ ಆಟಗಾರರು ತಂಡಕ್ಕೆ ಟ್ರೋಫಿಯ ಕಾಣಿಕೆ ನೀಡಿದರು.
ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದ ರೈಸಿಂಗ್ ಪುಣೆ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 128 ರನ್ ಗಳಿಸಿತು. ಮುಂಬೈ ತಂಡ 1 ರನ್ ರೋಚಕ ಜಯ ಸಾಧಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಪುಣೆ ತಂಡಕ್ಕೆ ಗೆಲ್ಲುವ ಅವಕಾಶ ಇತ್ತು. ಆದರೆ ಮುಂಬೈ ಬೌಲರ್‌ಗಳ ದಿಟ್ಟ ಆಟವೇ ಮೇಲುಗೈ ಸಾಧಿಸಿತು. ಕಳೆದ ಹತ್ತು ಆವೃತ್ತಿಗಳಲ್ಲಿ ಮೂರನೇ ಬಾರಿ ಪ್ರಶಸ್ತಿ ಗೆದ್ದು ಸಾಧನೆ ಮಾಡಿತು.