ಮ್ಯಾನ್ಮಾರ್‌ನಲ್ಲಿ ಹೆಚ್ಚುತ್ತಿರುವ ರೊಹಿಂಗ್ಯಾ ವಿರೋಧಿ ಹಿಂಸಾಚಾರದಿಂದ ಕಂಗೆಟ್ಟಿರುವ ರೊಹಿಂಗ್ಯಾ ಮುಸ್ಲಿಮರು ಪ್ಲಾಸ್ಟಿಕ್ ಡಬ್ಬಗಳನ್ನು ಬಳಸಿ ಸಮುದ್ರ ದಾಟಿ ಬಾಂಗ್ಲಾದೇಶಕ್ಕೆ ಬರುತ್ತಿದ್ದಾರೆ.

ಇತ್ತೀಚೆಗೆ 13 ವರ್ಷದ ಬಾಲಕ ನಬಿ ಹುಸೈನ್ ಪ್ಲಾಸ್ಟಿಕ್ ತೈಲ ಡಬ್ಬವನ್ನು ಬಳಸಿ ಬಾಂಗ್ಲಾದೇಶಕ್ಕೆ ಬರುವ ಮೂಲಕ ತನ್ನ ಜೀವ ಉಳಿಸಿಕೊಂಡಿದ್ದಾರೆ. ಅವನಿಗೆ ಈಜಲು ಗೊತ್ತಿರಲಿಲ್ಲ ಹಾಗೂ ಮ್ಯಾನ್ಮಾರ್‌ನಲ್ಲಿನ ತನ್ನ ಗ್ರಾಮದಿಂದ ಪಲಾಯನಗೈಯುವ ಮೊದಲು ಸಮುದ್ರವನ್ನೂ ನೋಡಿರಲಿಲ್ಲ. ಆದರೆ, ಖಾಲಿ ಪ್ಲಾಸ್ಟಿಕ್ ಡಬ್ಬವನ್ನು ಹಿಡಿದುಕೊಂಡ ನಬಿ ಹುಸೈನ್ ಬಂಗಾಳ ಕೊಲ್ಲಿಯಲ್ಲಿ 4 ಕಿ.ಮೀ. ದಾಟಿ ಬಾಂಗ್ಲಾದೇಶಕ್ಕೆ ಬಂದರು.

ಮ್ಯಾನ್ಮಾರ್‌ನ ರೊಹಿಂಗ್ಯಾ ಮುಸ್ಲಿಮರು ಅಲ್ಲಿನ ಹಿಂಸಾಚಾರದಿಂದ ಎಷ್ಟು ಕಂಗೆಟ್ಟಿದ್ದಾರೆಂದರೆ, ಕೆಲವರು ಸಮುದ್ರವನ್ನು ಈಜಿ ದಾಟಲು ಪ್ರಯತ್ನಿಸುತ್ತಿದ್ದಾರೆ.
ಒಂದೇ ವಾರದಲ್ಲಿ, 40ಕ್ಕೂ ಅಧಿಕ ಬಾಲಕರು ಮತ್ತು ಯುವಕರು ಪ್ಲಾಸ್ಟಿಕ್ ಡಬ್ಬಗಳನ್ನು ತೆಪ್ಪದಂತೆ ಬಳಸಿಕೊಂಡು ನಾಫ್ ನದಿಯನ್ನು ಅಳಿವೆ ಪ್ರದೇಶದಲ್ಲಿ ದಾಟಿ ಶಾ ಪೊರಿರ್ ದ್ವೀಪಕ್ಕೆ ಬಂದಿದ್ದಾರೆ.

‘‘ನಾನು ತುಂಬಾ ಹೆದರಿದ್ದೆ. ಇದು ನನ್ನ ಕೊನೆಯ ದಿನವೆಂದೇ ನಾನು ಭಾವಿಸಿದ್ದೆ’’ ಎಂದು ನಬಿ ಹೇಳುತ್ತಾನೆ.
ರೊಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್‌ನಲ್ಲಿ ದಶಕಗಳಿಂದ ವಾಸಿಸುತ್ತಿದ್ದರೂ, ಬೌದ್ಧ ಬಹುಸಂಖ್ಯಾತ ದೇಶವು ಅವರನ್ನು ಬಾಂಗ್ಲಾದೇಶದಿಂದ ಬಂದ ಅತಿಕ್ರಮಣಕಾರಿಗಳಂತೆ ಪರಗಣಿಸುತ್ತಿದೆ. ಅಲ್ಲಿನ ಸರಕಾರವು ಅವರಿಗೆ ಮೂಲಭೂತ ಹಕ್ಕುಗಳನ್ನು ನಿರಾಕರಿಸಿದೆ.

ರೊಹಿಂಗ್ಯಾ ಮುಸ್ಲಿಮರು ಜಗತ್ತಿನ ಅತ್ಯಂತ ಮರ್ದನಕ್ಕೊಳಗಾದ ಅಲ್ಪಸಂಖ್ಯಾತ ಗುಂಪು ಎಂಬುದಾಗಿ ವಿಶ್ವಸಂಸ್ಥೆ ಹೇಳಿದೆ.
‘‘ಮ್ಯಾನ್ಮಾರ್‌ನಲ್ಲಿ ನಾವು ಸಂಕಷ್ಟ ಎದುರಿಸಬೇಕಾಗಿದೆ. ಹಾಗಾಗಿ, ಅದಕ್ಕಿಂತ ಸಮುದ್ರದಲ್ಲಿ ಮುಳುಗುವುದೇ ಉತ್ತಮ ಎಂದು ನಾವು ಯೋಚಿಸಿದೆವು’’ ಎಂದು ಪ್ಲಾಸ್ಟಿಕ್ ಡಬ್ಬವನ್ನು ಹಿಡಿದು ಈಜುತ್ತಾ ಬಾಂಗ್ಲಾದೇಶಕ್ಕೆ ಬಂದ 18 ವರ್ಷದ ಕಮಲ್ ಹುಸೈನ್ ಹೇಳುತ್ತಾರೆ.