ಈಗಿನ ಮದುವೆಗಳ ಟ್ರೆಂಡೇ ಬದಲಾಗಿದೆ.ಮದುವೆ ಸಮಾರಂಭಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಜೊತೆಗೆ,ವಧು-ವರರು ಡ್ಯಾನ್ಸ್ ಮಾಡುವುದು ಸಾಮಾನ್ಯ.ಆದ್ರೆ ಇಲ್ಲೊಂದು ಮದುವೆಯಲ್ಲಿ ವರ ಡ್ಯಾನ್ಸ್ ಮಾಡಿದ್ದರಿಂದ, ವಧು ಮದುವೆಯನ್ನೇ ತಿರಸ್ಕರಿಸಿದ ಘಟನೆ ನಡೆದಿದೆ.

ಹೌದು.ಉತ್ತರಪ್ರದೇಶದ ಶಹಜಹಾನ್‍ಪುರದಲ್ಲಿ ನಡೆದ ಒಂದು ಮದುವೆಯಲ್ಲಿ, ವರ ನಾಗಿಣಿ ಡ್ಯಾನ್ಸ್ ಮಾಡಿದ್ದರಿಂದ ವಧು ಮದುವೆಯನ್ನೇ ತಿರಸ್ಕರಿಸಿದ್ದಾಳೆ.

ಉತ್ತರಪ್ರದೇಶದ ಶಹಜಹಾನ್‍ಪುರದ ಪ್ರಿಯಾಂಕಾ ತ್ರಿಪಾಠಿ ಮತ್ತು ಅನುಭವ್ ಮಿಶ್ರಾ ಅವರ ಮದುವೆಯನ್ನು ಕುಟುಂಬಸ್ಥರು ನಿಗದಿ ಮಾಡಿದ್ದರು. ಎಲ್ಲಾ ಸುಸೂತ್ರವಾಗಿ ನಡೆದುಕೊಂಡು ಬಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ವರನು ಕುಡಿದ ಸ್ಥಿತಿಯಲ್ಲಿ, ನಾಗಿಣಿ ಡ್ಯಾನ್ಸ್ ಮಾಡಿ ದೊಡ್ಡ ಯಡವಟ್ಟು ಮಾಡಿಕೊಂಡಿದ್ದಾನೆ.

ವರ ಅನುಭವ್ ಮಿಶ್ರಾ ಮಾಡಿದ ನಾಗಿಣಿ ಡ್ಯಾನ್ಸ್ ನಿಂದ ಮುಜುಗರವಾದ ಕಾರಣ, ಇನ್ನೇನು ಮದುವೆಯ ಶಾಸ್ತ್ರಗಳು ಆರಂಭವಾಗಬೇಕಿದ್ದ ಕೆಲವೇ ಸಮಯದ ಮುಂಚೆ ವಧು ಮದುವೆ ನಿರಾಕರಿಸಿದ್ದಾಳೆ.

ವರನ ಸಂಬಂಧಿಕರು ಹಾಗೂ ಸ್ನೇಹಿತರು ವಧು ಪ್ರಿಯಾಂಕಾಳ ಮನವೊಲಿಸಲು ಪ್ರಯತ್ನಿಸಿದರಾದ್ರೂ ಆಕೆ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ವಧುವಿನ ತಂದೆಯೂ ಕೂಡ ಮಗಳ ನಿರ್ಧಾರವನ್ನು ಬೆಂಬಲಿಸಿದ್ದಾರೆ. ವರ ಮಾಡಿದ ಕೆಲಸದಿಂದ ನಿಜಕ್ಕೂ ಮುಜುಗರ ಅನುಭವಿಸಬೇಕಾಯ್ತು. ಆದ್ದರಿಂದ ನಾನು ನನ್ನ ಮಗಳ ಪರ ನಿಲ್ಲಬೇಕಾಯ್ತು ಎಂದು ಅವರು ಹೇಳಿದ್ದಾರೆ.

ಕೊನೆಗೆ ಪ್ರಿಯಾಂಕಾ ಮರುದಿನವೇ ಬೇರೊಬ್ಬ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ.
