ಸುದ್ದಿ

ಝೊಮ್ಯಾಟೋ ಮೇಲೆ 55 ಸಾವಿರ ದಂಡ ವಿಧಿಸಿದ ಕೋರ್ಟ್…ಸಸ್ಯಾಹಾರಿ ಕೇಳಿದಕ್ಕೆ ಮಾಂಸಹಾರಿ ಡೆಲಿವರಿ

By admin

July 08, 2019

ಸಸ್ಯಾಹಾರಿ ಖಾದ್ಯವನ್ನು ಆರ್ಡರ್ ಮಾಡಿದ್ದ ವಕೀಲರೊಬ್ಬರಿಗೆ ಮಾಂಸಾಹಾರಿ ಖಾದ್ಯವನ್ನು ಡೆಲಿವರಿ ಮಾಡಿದ್ದಕ್ಕಾಗಿ ಆಹಾರ ಸರಬರಾಜು ಮಾಡುವ ಝೊಮ್ಯಾಟೋ ಹಾಗೂ ಆ ಮಾಂಸಾಹಾರಿ ಖಾದ್ಯವನ್ನು ನೀಡಿದ ಹೋಟೆಲ್ ಗೆ ಪುಣೆಯ ಗ್ರಾಹಕ ನ್ಯಾಯಾಲಯವು 55 ಸಾವಿರ ರುಪಾಯಿ ದಂಡ ವಿಧಿಸಿದೆ. ಮಾಧ್ಯಮದ ವರದಿ ಪ್ರಕಾರ, ಇನ್ನು ನಲವತ್ತೈದು ದಿನದೊಳಗೆ ವಕೀಲ ಷಣ್ಮುಖ್ ದೇಶ್ ಮುಖ್ ಗೆ ದಂಡದ ಮೊತ್ತ ಪಾವತಿಸುವಂತೆ ಕೋರ್ಟ್ ಸೂಚನೆ ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ಶುಭಾಂಗಿ ದುನಾಖೆ ಮತ್ತು ಅನಿಲ್ ಜವಲೇಕರ್ ಅವರಿದ್ದ ಪೀಠ, ಪುಣೆಯ ಕೇಂದ್ರ ಕಚೇರಿ, ಗುರ್ಗಾಂವ್ ಕೇಂದ್ರ ಕಚೇರಿ ಹಾಗೂ ಪುಣೆಯ ಹೋಟೆಲ್ ಪ್ರೀತ್ ಪಂಜಾಬಿ ಸ್ವಾದ್ ಹೋಟೆಲ್‍ಗೆ 55 ಸಾವಿರ ರೂ. ದಂಡ ವಿಧಿಸಿದ್ದು, 45 ದಿನಗಳಲ್ಲಿ ದಂಡವನ್ನು ಗ್ರಾಹಕರಿಗೆ ಪಾವತಿಸವಂತೆ ಸೂಚಿಸಿದೆ. ತಡವಾದರೆ ಅದಕ್ಕೆ ಅನ್ವಯವಾಗುವ ಬಡ್ಡಿಯನ್ನು ಸೇರಿಸಿ ಹಣ ನಿಡುವಂತೆ ಸೂಚಿಸಿದೆ.

ಪನ್ನೀರ್ ಬಟರ್ ಮಸಾಲವನ್ನು ಆರ್ಡರ್ ಮಾಡಿದ್ದ ವಕೀಲರಿಗೆ ಅದರ ಬದಲಿಗೆ ಬಟರ್ ಚಿಕನ್ ಡೆಲಿವರಿ ಮಾಡಲಾಗಿದೆ. ಎರಡಕ್ಕೂ ಬಳಸುವ ಸಂಬಾರು ಪದಾರ್ಥಗಳು ಬಹುತೇಕ ಒಂದೇ ಥರ ಇರುವುದರಿಂದ ವಕೀಲರಿಗೆ ವ್ಯತ್ಯಾಸ ಗೊತ್ತಾಗದೆ ಚಿಕನ್ ಅನ್ನೇ ತಿಂದಿದ್ದರು.ಅಂದ ಹಾಗೆ ಅವರಿಗೆ ಹೀಗೆ ಸಸ್ಯಾಹಾರದ ಬದಲಿಗೆ ಮಾಂಸಾಹಾರ ಖಾದ್ಯವನ್ನು ಡೆಲಿವರಿ ಮಾಡಿದ್ದು ಎರಡು ಬಾರಿಯಂತೆ.

ಈ ಕುರಿತು ಝೊಮ್ಯಾಟೊ ಸ್ಪಷ್ಟಪಡಿಸಿದ್ದು, ವಕೀಲರು ಆಪ್‍ನಲ್ಲಿಯೇ ದೂರು ನೀಡಿದ್ದರು. ಈಗಾಗಲೇ ಅವರ ಹಣವನ್ನು ಮರುಪಾವತಿ ಮಾಡಲಾಗಿದೆ ಎಂದು ತಿಳಿಸಿದೆ. ಅಲ್ಲದೆ ಬೇರೆ ಪದಾರ್ಥ ಡೆಲಿವರಿ ಮಾಡಿರುವುದು ಹೋಟೆಲ್ ತಪ್ಪು ಎಂದು ಝೊಮ್ಯಾಟೊ ವಾದಿಸಿದೆ. ಹೋಟೆಲ್‍ನಷ್ಟೇ ತಪ್ಪು ಸಂಸ್ಥೆಯದ್ದೂ ಇದೆ ಎಂದು ಗ್ರಾಹಕರ ನ್ಯಾಯಾಲಯ ತಿಳಿಸಿದೆ. ಹೋಟೆಲ್ ಸಹ ತನ್ನ ತಪ್ಪನ್ನು ಒಪ್ಪಿಕೊಂಡಿದೆ.