ಇದು ಸ್ಫೂರ್ತಿಯ ಕತೆ ಆ ಹುಡುಗಿ ಮೂರು ಚಿನ್ನದ ಪದಕ ಗೆದ್ದು ವಿಶ್ರಾಂತಿ ಪಡೆಯುತ್ತಿದ್ದಳು. ಈ ವೇಳೆ, ಈಕೆ ಎಲ್ಲರ ಗಮನ ಸೆಳೆದದ್ದು ಗೆದ್ದ ಪದಕಗಳಿಂದ ಅಲ್ಲ. ಬದಲಾಗಿ ಸಾಧನೆಯ ಹಿಂದಿನ ಛಲದಿಂದ.
ಸಾಧಿಸುವ ಛಲ, ಉತ್ಸಾಹ ಒಂದಿದ್ದರೆ ಏನನ್ನು ಬೇಕಾದರೂ ಸಾಧಿಸಿ ತೋರಿಸಬಹುದು. ಸತತ ಶ್ರಮ, ಛಲ, ಪ್ರಾಮಾಣಿಕ ಪ್ರಯತ್ನವಿದ್ದರೆ ಕಷ್ಟಗಳು ಅಡ್ಡಿಯೇ ಅಲ್ಲ. ಈ ಮಾತಿಗೆ ಸಾಕ್ಷಿ ಫಿಲಿಪೈನ್ಸ್‌ನ ಈ ಬಾಲಕಿ. 11 ವರ್ಷದ ಈ ಬಾಲಕಿಯ ಕತೆ ಕೇಳಿದರೆ ಹೃದಯ ಭಾರವಾಗುತ್ತದೆ. ಈಕೆಯನ್ನು ಹರಸಲು ಮನಸ್ಸು ಬಯಸುತ್ತದೆ… ಯಾಕೆಂದರೆ, ಈಕೆಯ ಸಾಧನೆ ಅಂತಿಂಥಹದ್ದಲ್ಲ…!
ರಿಯಾ ಬುಲೋಸ್… ಈ ಕತೆಯ ನಾಯಕಿ. ಫಿಲಿಪೈನ್ಸ್‌ನ 11 ವರ್ಷದ ಈ ಟ್ರ್ಯಾಕ್ ಅಥ್ಲೀಟ್ ತನ್ನ `ತಾತ್ಕಾಲಿಕ ಶೂ’ ತೊಟ್ಟು ಓಟದಲ್ಲಿ ಚಿನ್ನದ ಪದಕ ಗೆಲ್ಲುವುದರೊಂದಿಗೆ, ಸದ್ಯ ಈ ಬಾಲಕಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ತನ್ನ ಛಲದ ಮೂಲಕ ವಿಶ್ವದ ಹೃದಯ ಗೆದ್ದಿದ್ದಾಳೆ. ನೆಟ್ಟಿಗರಂತೂ ರಿಯಾ ಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇಲೊಯಿಲೊ ಪ್ರಾಂತ್ಯದ ಸ್ಥಳೀಯ ಶಾಲೆಯಲ್ಲಿ ಇಂಟರ್ ಸ್ಕೂಲ್ ಕ್ರೀಡಾಕೂಟ ಆಯೋಜನೆಗೊಂಡಿತ್ತು. ಶಾಲೆಗಳ ಕ್ರೀಡಾಕೂಟದಲ್ಲಿ ರಿಯಾ ಬುಲೋಸ್ 400 ಮೀಟರ್, 800 ಮೀಟರ್ ಮತ್ತು 1,500 ಮೀಟರ್ ಸ್ಪರ್ಧೆಗಳಲ್ಲಿ ಮೂರು ವಿಭಾಗಗಳಲ್ಲೂ ಚಿನ್ನದ ಪದಕ ಗೆಲ್ಲುವ ಮೂಲಕ ಬಾಲಕಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾಳೆ. ಈ ವೇಳೆ, ಈಕೆಯ ಸಾಧನೆಯ ಜೊತೆಜೊತೆ ಎಲ್ಲರ ಹೃದಯ ಭಾರವಾಗಿಸಿದ್ದು ಬಾಲಕಿಯ `ತಾತ್ಕಾಲಿಕ ಶೂ’ ಮತ್ತು ಆಕೆಯ ಬಡತನ.
ರಿಯಾ ಮೂರು ಚಿನ್ನದ ಪದಕ ಗೆದ್ದಿರುವ ಹಿಂದೆ ನೋವಿನ ಕತೆ ಇದೆ. ಈಕೆಗೆ ಸಾಧಿಸುವ ಛಲವಿತ್ತು ನಿಜ. ಆದರೆ, ಇದಕ್ಕೆ ಬಡತನ ಅಡ್ಡಿಯಾಗಿತ್ತು. ಹಾಗಂತ, ರಿಯಾ ಮನೆಯಲ್ಲಿ ಸುಮ್ಮನೆ ಕುಳಿತಿರಲಿಲ್ಲ. ಆಟದಲ್ಲಿ ಪಾಲ್ಗೊಂಡಿದ್ದಳು. ಸ್ಪೋರ್ಟ್ಸ್ ಶೂ ಕೊಳ್ಳಲೂ ಹಣ ಇರಲಿಲ್ಲ. ಆದರೆ, ಆಟದಲ್ಲಿ ಪಾಲ್ಗೊಳ್ಳದೆ ಮನಸ್ಸು ಕೇಳಿರಲಿಲ್ಲ. ಹೀಗಾಗಿ, ಬಾಲಕಿಯೇ ಒಂದು ತಾತ್ಕಾಲಿಕ ಶೂ ತಯಾರಿಸಿದ್ದಳು. ಅದೇ ಬ್ಯಾಂಡೇಜ್ ಶೂ…! ನಿಜ, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸಲುವಾಗಿಯೇ ರಿಯಾ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಓಡಿದ್ದಳು…!
ರಿಯಾಳ ಜಯವನ್ನು ಇಲಾಯ್ಲೊ ಸ್ಪೋಟ್ರ್ಸ್ ಕೌನ್ಸಿಲ್ ಮೀಟ್ ಕೋಚ್ ಪ್ರೆಡೆರಿಕ್ ಬಿ. ವೇಲೆನ್‍ಜುವೆಲಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಿಯಾ ಆಟದ ವೇಳೆ ಶೂಗಳನ್ನು ಧರಿಸುವುದಿಲ್ಲ. ಬದಲಿಗೆ ತನ್ನ ಪಾದಗಳಿಗೆ ಬ್ಯಾಂಡೇಜ್ ಧರಿಸಿದ್ದಾಳೆ. ಅಷ್ಟೇ ಅಲ್ಲದೆ ಪಾದಗಳಿಗೆ ಶೂಗಳಂತೆ ಸುತ್ತಿಕೊಂಡ ಬ್ಯಾಂಡೇಜ್ ಮೇಲೆ ನೈಕ್ ಎಂದು ಬರೆದುಕೊಂಡಿದ್ದಾಳೆ.
ವೇಲೆನ್‍ಜುವೆಲಾ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೂರಾರು ನೆಟ್ಟಿಗರು ರಿಯಾಳಿಗೆ ಹೊಸ ಶೂಗಳನ್ನು ನೀಡಲು ಮುಂದಾದರು. ಬ್ಯಾಸ್ಕೆಟ್‍ಬಾಲ್ ಅಂಗಡಿಯೊಂದರ ಮಾಲೀಕರು ಟ್ವಿಟ್ ಮೂಲಕ ಬಾಲಕಿಯ ಶೂ ಸೈಜ್ ಕೇಳಿ ಸಹಾಯ ಮಾಡಿದ್ದಾರೆ.