ಕೊಪ್ಪಳ: ತಲ್ಲೂರು ಕೆರೆ ಯಾರಿಗೆ ನೆನಪಿಲ್ಲ ಹೇಳಿ.. ನಟ ಯಶ್ ಆ ಜಿಲ್ಲೆಯ ತಲ್ಲೂರು ಕೆರೆಯನ್ನು ಅಭಿವೃದ್ದಿ ಪಡಿಸಿ ಅಧುನಿಕ ಭಗಿರಥನಾಗಿದ್ದರು. ಈ ಕಾರಣಕ್ಕಾಗಿಯೇ ತಲ್ಲೂರು ಕೆರೆ ಜನಮಾನಸದಲ್ಲಿ ಉಳಿದಿದೆ. ಆದ್ರೆ ಇದೇ ಕೆರೆಯಲ್ಲಿ ಯಶ್ ಅಭಿವೃದ್ದಿ ಪಡಿಸುವ ಮೊದಲು ಅದೊಂದು ಇಲಾಖೆ ಬರೊಬ್ಬರಿ ಒಂದು ಕೋಟಿ ಖರ್ಚು ಮಾಡಿದೆ ಅಂತಾ ಹಣ ಗುಳುಂ ಮಾಡಿದೆ.
ನಟ ಯಶ್ 2017ರಲ್ಲಿ ತಮ್ಮ ಯಶೋಮಾರ್ಗ ಫೌಂಡೇಶನ್ ವತಿಯಿಂದ ಸ್ವಂತ ಖರ್ಚಿನಲ್ಲಿ ಬರೊಬ್ಬರಿ 70 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ತಲ್ಲೂರು ಕೆರೆ ಅಭಿವೃದ್ದಿ ಪಡಿಸಿದ್ರು. ಅವರ ಶ್ರಮದಂತೆ ತಲ್ಲೂರು ಕೆರೆಯೂ ಸಂಪೂರ್ಣವಾಗಿ ಭರ್ತಿಯಾಗಿ 25 ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯೋ ನೀರು ಒದಗಿಸುತ್ತಿದೆ. ಆದ್ರೆ ಕೊಪ್ಪಳದ ಸಣ್ಣನೀರಾವರಿ ಇಲಾಖೆ ಮಾತ್ರ 2015-16ರಲ್ಲಿ ಕಾಟಾಚಾರಕ್ಕೆ ಅಲ್ಪಸ್ವಲ್ಪ ಕಾಮಗಾರಿ ನಡೆಸಿ ಬರೊಬ್ಬರಿ 1 ಕೋಟಿ ಹಣ ಗುಳುಂ ಮಾಡಿದ್ದಾರೆ. ಈ ಬಗ್ಗೆ ಟಿವಿ5ಗೆ ದಾಖಲೆಗಳು ಲಭ್ಯವಾಗಿದ್ದು, ಸಣ್ಣನೀರಾವರಿ ಇಲಾಖೆ ಕೆರೆಯನ್ನು ಅಭಿವೃದ್ದಿ ಪಡಿಸಿದ್ರೆ, ಯಶ್ ಯಾಕೆ ಇಲ್ಲಿ ಬಂದು ಅಷ್ಟೊಂದು ಹಣ ಖರ್ಚು ಮಾಡಿ ಕೆರೆ ಅಭಿವೃದ್ದಿ ಪಡಿಸ್ತಾ ಇದ್ರು ಎನ್ನುವ ಮಾತುಗಳು ಕೇಳಿಬಂದಿದೆ.
ಇಲಾಖೆಯ ಅಧಿಕಾರಿಗಳು ತಲ್ಲೂರು ಕೆರೆಯ ತಡೆಗೊಡೆ ನಿರ್ಮಾಣ, ಊಳೆತ್ತುವುದು ಸೇರಿದಂತೆ ಕೆರೆಗೆ ನೀರು ಹರಿಯುವುದಕ್ಕೆ ಕಾಲುವೆಗಳನ್ನು ನಿರ್ಮಾಣ ಮಾಡಿದ್ಧೇವೆ ಅಂತಾ ಬರೊಬ್ಬರಿ 1 ಕೋಟಿ 4 ಲಕ್ಷ ರೂ ಹಣ ಎತ್ತುವಳಿ ಮಾಡಿದ್ದಾರೆ. ಕೇವಲ 5 ರಿಂದ 10 ಲಕ್ಷ ರೂ ಹಣ ಮಾತ್ರ ಅಧಿಕಾರಿಗಳು ಖರ್ಚು ಮಾಡಿ ಕೋಟಿ ರೂ ಹಣ ಕಮಾಯ್ ಮಾಡಿದ್ದಾರೆ. ತಕ್ಷಣ ಈ ಬಗ್ಗೆ ಸಣ್ಣನೀರಾವರಿ ಇಲಾಖೆಯ ಸಚಿವರು ಇತ್ತ ಕಡೆ ಗಮನಹರಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಈ ಹಿಂದೆ ಕೊಪ್ಪಳ ಸಣ್ಣನೀರಾವರಿ ಇಲಾಖೆಯ ನಡೆದಿದ್ದ ಹಗರಣ ಸಿಐಡಿ ತನಿಖೆಯಲ್ಲಿ ಇರುವಾಗಲೇ ಮತ್ತೊಂದು ಹಗರಣ ಬೆಳಕಿಗೆ ಬಂದಿದ್ದು, ಇಲಾಖೆಯ ವಿರುದ್ದ ಜನ್ರು ಛೀಮಾರಿ ಹಾಕ್ತಾ ಇದ್ದಾರೆ.. ಈಗಲಾದ್ರೂ ಯಶ್ ನ ಕನಸಿನ ಕೂಸು ತಲ್ಲೂರು ಕೆರೆಯ ಹಗರಣವನ್ನು ಸಣ್ಣನೀರಾವರಿ ಸಚಿವರಾದ ಸಿ.ಎಸ್ ಪುಟ್ಟರಾಜು ತನಿಖೆ ನಡೆಸ್ತಾರಾ ಕಾದು ನೋಡಬೇಕಿದೆ.