ಲಕ್ನೋ: ಗೂಡ್ಸ್ ರೈಲು ಹಳಿ ತಪ್ಪಿದ್ದ ಸುದ್ದಿಯನ್ನು ವರದಿ ಮಾಡಲು ಹೋಗಿದ್ದ ಪತ್ರಕರ್ತನ ಮೇಲೆ ಹಲ್ಲೆ ಮಾಡಿ, ಆತನ ಬಟ್ಟೆ ಬಿಚ್ಚಿಸಿ ಬಲವಂತವಾಗಿ ಮೂತ್ರ ಕುಡಿಸಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಧೀಮಾನ್ಪುರಾದಲ್ಲಿ ಗೂಡ್ಸ್ ರೈಲು ಹಳಿತಪ್ಪಿದ ಸಂದರ್ಭದಲ್ಲಿ ಪತ್ರಕರ್ತ ವರದಿ ಮಾಡಲು ಹೋದಾಗ ಈ ಘಟನೆ ನಡೆದಿದೆ. ಸರ್ಕಾರಿ ರೈಲ್ವೇ ಪೊಲೀಸ್(ಜಿಆರ್ ಪಿ) ಅಧಿಕಾರಿ ರಾಕೇಶ್ ಕುಮಾರ್ ನೇತೃತ್ವದ ಸಿಬ್ಬಂದಿ ಪತ್ರಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ. ಪತ್ರಕರ್ತನ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಪತ್ರಕರ್ತನಿಗೆ ಚಿತ್ರಹಿಂಸೆ ಕೊಟ್ಟಿರುವುದನ್ನು ಕಾಣಬಹುದಾಗಿದೆ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪತ್ರಕರ್ತ, ಸಿಬ್ಬಂದಿ ಯೂನಿಫಾರ್ಮ್ ನಲ್ಲಿ ಇರಲಿಲ್ಲ. ವರದಿ ಮಾಡಲು ತೆರಳಿದಾಗ ಅವರು ಏಕಾಏಕಿ ಬಂದು ನನ್ನ ಕ್ಯಾಮೆರಾವನ್ನು ಕಸಿದುಕೊಂಡು ಬಿಸಾಕಿದರು. ಈ ವೇಳೆ ಬಿದ್ದ ಕ್ಯಾಮೆರಾವನ್ನು ಎತ್ತಿಕೊಳ್ಳಲೆಂದು ಬಗ್ಗಿದಾಗ ನನ್ನ ಮೇಲೆ ಮನಸ್ಸೋ ಇಚ್ಛೆ ಥಳಿಸಿ ನಿಂದಿಸಿದರು. ಅಷ್ಟೇ ಅಲ್ಲದೆ ನನ್ನನ್ನು ಲಾಕಪ್‍ಗೆ ಹಾಕಿದರು. ಈ ವೇಳೆ ಅವರು ಬಲವಂತವಾಗಿ ನನ್ನ ಬಟ್ಟೆ ಬಿಚ್ಚಿಸಿ ಬಾಯಿಗೆ ಮೂತ್ರ ಕುಡಿಸಿದರು ಎಂದು ಪತ್ರಕರ್ತ ತನ್ನ ಅಳಲು ತೋಡಿಕೊಂಡಿದ್ದಾರೆ.
ಪೊಲೀಸರು ಪತ್ರಕರ್ತನನ್ನು ಶಾಮ್ಲಿಯಲ್ಲಿರುವ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ರಾತ್ರಿ ಇಡೀ ಅಲ್ಲೆ ಇರಿಸಿಕೊಂಡು ಬುಧವಾರ ಬೆಳಗ್ಗೆ ಬಿಡುಗಡೆ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ವಿಡಿಯೋಗಳು ವೈರಲ್ ಆಗಿದ್ದು, ಪತ್ರಕರ್ತ ಕಂಬಿಯ ಹಿಂದೆ ನಿಂತಿದ್ದಾಗ ರಾಕೇಶ್ ಕುಮಾರ್ ಹೊರಗೆ ಕುರ್ಚಿಯ ಮೇಲೆ ಕುಳಿತುಕೊಂಡಿರುವುದನ್ನು ಕಾಣಬಹುದಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಸಹೋದ್ಯೋಗಿಗಳು ಪೊಲೀಸ್ ಠಾಣೆಯ ಮುಂದೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಅವರಲ್ಲಿ ಪತ್ರಕರ್ತ, ರೈಲ್ವೇ ಪೊಲೀಸ್ ಪಡೆಯ ವಿರುದ್ಧ ವರದಿ ಮಾಡಿದೆ ಎಂದು ಆರೋಪಿಸಿ ನನಗೆ ಹಿಂಸೆ ನೀಡುತ್ತಾರೆ ಎಂದು ಹೇಳಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ರಾಕೇಶ್ ಕುಮಾರ್ ಮತ್ತು ಪೇದೆ ಸುನೀಲ್ ಕುಮಾರ್ ನನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಪ್ರಶಾಂತ್ ಕನೋಜಿಯಾ ವಿರುದ್ಧ ಹಜರತ್ ಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪತಿಯನ್ನು ಬಂಧಿಸಿದ ಹಿನ್ನೆಲೆಯಲ್ಲಿ ಕನೋಜಿಯಾ ಅವರ ಪತ್ನಿ ಸುಪ್ರೀಂನಲ್ಲಿ ಉತ್ತರ ಪ್ರದೇಶ ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದರು. ಆದರೆ ಪ್ರಶಾಂತ್ ಕನೋಜಿಯಾ ಅವರನ್ನು ಕೂಡಲೇ ಬಿಡುಗಡೆ ಮಾಡಿ ಎಂದು ಆದೇಶಿಸಿ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಪೊಲೀಸರಿಗೆ ಚಾಟಿ ಬೀಸಿತ್ತು.