ಸುದ್ದಿ

ಮನೆಯಲ್ಲೆ ರಕ್ಷಣೆ ಇಲ್ಲದ್ದಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ,ಇದನ್ನೊಮ್ಮೆ ಓದಿ …!

By admin

August 22, 2019

2017ರಲ್ಲಿಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ.

ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ 25ರಂದು ಬಿಡುಗಡೆಮಾಡಿರುವ ಅಧ್ಯಯನ ವರದಿ. ನವೆಂಬರ್ 25, ಮಹಿಳೆಯರ ವಿರುದ್ಧದ ಹಿಂಸಾಚಾರ ತಡೆಗೆ ಗೊತ್ತು ಮಾಡಲಾದ ಅಂತರರಾಷ್ಟ್ರೀಯ ದಿನವೂ ಹೌದು. ಈ 87 ಸಾವಿರವಾಗಲೀ 50 ಸಾವಿರವಾಗಲೀ ಸರ್ಕಾರಿ ಲೆಕ್ಕದಿಂದ ತೆಗೆದುಕೊಂಡದ್ದುಮಾತ್ರ ಎಂಬುದನ್ನು ಗ್ರಹಿಸಿದರೆ, ಇದರಾಚೆಗಿನ ಸತ್ಯದ ಭೀಕರತೆಯನ್ನು ಊಹಿಸಬಹುದು.

ಮಹಿಳೆಯ ವಿರುದ್ಧದ ಮನೆಯೊಳಗಿನದ್ದೇ ಹಿಂಸೆಯನ್ನು ಲೆಕ್ಕಕ್ಕೆ ತೆಗೆದುಕೊಂಡಿರುವ ವಿಶ್ವಸಂಸ್ಥೆಯ ಈ ಅಧ್ಯಯನ, ಮಹಿಳೆಯನ್ನುಸುತ್ತುವರಿಸಿರುವ ಹಂತಕ ಪಹರೆಯ ಕುರಿತ ಒಂದು ಸ್ಥೂಲ ಚಿತ್ರ ಮಾತ್ರ.ಈ ಅಂಕಿಅಂಶ ಮನೆಯವರಿಂದಲೇ,ಪರಿಚಿತರಿಂದಲೇ ಕೊಲೆಯಾಗಿ ಹೋಗುತ್ತಿರುವ ಮಹಿಳೆಯ ಎದುರಿನ ಪ್ರತಿಕ್ಷಣದ ಆತಂಕಕಾರಿ ಸ್ಥಿತಿಯ ಸೂಚಕವಷ್ಟೆ. ಯಾರನ್ನೋ ಮದುವೆಯಾಗಿ, ಯಾರದೋ ಹಿಂದೆ ಓಡಿಹೋಗಿ ತಮ್ಮ ಮರ್ಯಾದೆ ಕಳೆದಳೆಂದು ಮನೆಮಗಳನ್ನೇ ಕೊಲ್ಲುವ ‘ಮರ್ಯಾದಸ್ಥ’ರಿಗೆ ಬಲಿಯಾದವರೂ ಈ ಲೆಕ್ಕದಲ್ಲಿದ್ದಾರೆ.

ಜಗತ್ತಿನಾದ್ಯಂತ ಪ್ರತಿ ತಾಸಿಗೆ 6 ಮಹಿಳೆಯರು ತಮಗೆ ಗೊತ್ತಿರುವ ವ್ಯಕ್ತಿಯಿಂದಲೇ ಕೊಲೆಯಾಗುತ್ತಿದ್ದಾರೆ.ವಿಶ್ವಸಂಸ್ಥೆಯ ಅಧ್ಯಯನವು ಎತ್ತಿಹೇಳುತ್ತಿರುವ ಮತ್ತೊಂದು ಅಂಶ, ಮನೆಯೊಳಗಿನವರು ಅಥವಾ ಪರಿಚಿತರ ಕೈಯಲ್ಲಿ ಮಹಿಳೆಯರು ಸಾಯುತ್ತಿರುವುದು ಜಗತ್ತಿನ ಬೇರೆ ಭಾಗಗಳಿಗೆ ಹೋಲಿಸಿದರೆ ಏಷ್ಯಾದಲ್ಲೇ ಹೆಚ್ಚು ಎಂಬುದು. ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ. ಎಂಥ ರಕ್ಕಸರ ಮಧ್ಯೆ ಬದುಕು ಕಟ್ಟಿಕೊಳ್ಳಲು ಹೋರಾಡುತ್ತಲೇ ಇದ್ದಾಳಲ್ಲ ಹೆಣ್ಣು!