ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಸಬಲೀಕರಣಕ್ಕಾಗಿ ಹಾಗೂ ಅವರಿಗೆ ರಕ್ಷಣೆ ನೀಡಿ ಸಮಾಜದ ಮುಖ್ಯವಾಹಿನಿಯಲ್ಲಿ ತರಲು ಇಲಾಖಾವತಿಯಿಂದ ಹಲವಾರು ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಸ್ತ್ರಿ ಶಕ್ತಿ ಸಂಘವು ಒಂದು.ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಒಂದು ಸಂಘದಲ್ಲಿ ಒಂದೆ ಕುಟುಂಬದ ಒಬ್ಬರು ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
ಒಂದೇ ಕುಟುಂಬದ ಹೆಚ್ಚು ಸದಸ್ಯರು ಒಂದೇ ಸಂಘದಲ್ಲಿ ಇದ್ದರೆ ಅದು ಅವ್ಯವಹಾರ, ಸರ್ಕಾರದ ಯೋಜನೆಗಳ ದುರ್ಬಳಕೆ ಆಗಬಹುದು ಎಂಬ ಕಾರಣದಿಂದ ಒಂದು ಸಂಘದಲ್ಲಿ ಮನೆಯ ಒಬ್ಬ ಸದಸ್ಯರಿಗೆ ಮಾತ್ರ ಅವಕಾಶ ನೀಡಲು ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯಿಂದ ಶಿಫಾರಸು ಮಾಡಲಾಗಿದೆ.
ಒಂದು ಸಂಘದಲ್ಲಿ ಕುಟುಂಬದ ಒಬ್ಬರು ಸದಸ್ಯರು ಮಾತ್ರ ಇರುವಂತೆ ಸಾಫ್ಟ್ ವೇರ್ ರಚಿಸಿ ಐಡಿ ಕಾರ್ಡ್ ವಿತರಿಸಲು ತಿಳಿಸಲಾಗಿದೆ.ಪ್ರತಿ ಸ್ತ್ರೀ ಶಕ್ತಿ ಗುಂಪಿಗೆ ಸುತ್ತುನಿಧಿ 5000 ರೂ. ಸ್ವಸಹಾಯ ಗುಂಪುಗಳಿಗೆ 25,000 ರೂ. ವರೆಗೂ ನೀಡಲಾಗುವುದು. ರಾಜ್ಯದಲ್ಲಿ 1.54 ಲಕ್ಷ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಂದ 23 ಲಕ್ಷ ಮಹಿಳೆಯರು ಸಂಘಟಿತರಾಗಿದ್ದಾರೆ.
ಇದುವರೆಗೂ ಸುಮಾರು 3,500 ಕೋಟಿ ರೂ.ಗಿಂತಲೂ ಹೆಚ್ಚು ಹಣ ಉಳಿತಾಯ ಮಾಡಲಾಗಿದ್ದು, 5,300 ಕೋಟಿ ರೂಪಾಯಿಗೂ ಹೆಚ್ಚು ಸಾಲ ಪಡೆದು ಆದಾಯೋತ್ಪನ್ನ ಚಟುವಟಿಕೆ ನಡೆಸಲಾಗಿದೆ. ಈ ಕುರಿತಾಗಿ ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಸ್ತ್ರೀ ಶಕ್ತಿ ಯೋಜನೆ ಬಲಗೊಳಿಸಲು ವಿಮಾನ, ರೈಲು, ನಿಲ್ದಾಣ ಬಸ್ ನಿಲ್ದಾಣಗಳಲ್ಲಿ ಸ್ತ್ರೀ ಶಕ್ತಿ ಸಂಘಗಳು ಉತ್ಪಾದಿಸುವ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಬೇಕೆಂದು ಸಲಹೆ ನೀಡಲಾಗಿದೆ.