ಅಮರಾವತಿ, ಸೆ.29-ಚುನಾವಣೆಗೂ ಮುನ್ನವೇ ರಾಜ್ಯಾದಾದ್ಯಂತ ಮದ್ಯ ನಿಷೇಧ ಮಾಡಲಾಗುವುದು ಎಂದು ಭರವಸೆ ನೀಡಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‍ಮೋಹನ್‍ರೆಡ್ಡಿ ಹಂತ ಹಂತವಾಗಿ ಜಾರಿಗೆ ತರಲು ಕ್ರಮಗಳನ್ನು ಕೈಗೊಂಡಿದ್ದಾರೆ.
ಈ ನಿಟ್ಟಿನಲ್ಲಿ ಅಕ್ಟೋಬರ್ 1 ರಿಂದಲೇ ಕಾರ್ಯಪ್ರವೃತ್ತವಾಗುವ ಜಗನ್ ಸರ್ಕಾರವು 3500 ಖಾಸಗಿ ಮದ್ಯದ ಅಂಗಡಿಗಳನ್ನು ಸರ್ಕಾರದ ಅಧೀನಕ್ಕೆ ಪಡೆದುಕೊಳ್ಳಲು ಕ್ರಮಕೈಗೊಂಡಿದೆ.
ಆಂಧ್ರದಾದ್ಯಂತ ಕಾರ್ಯಾಚರಣೆ ನಡೆಸಿದ್ದ ರಾಜ್ಯ ಪಾನೀಯ ನಿಗಮವು ಸೆಪ್ಟೆಂಬರ್ 1 ರಂದೇ 475 ವೈನ್‍ಶಾಪ್‍ಗಳನ್ನು ಒಳಪಡಿಸಿಕೊಂಡಿತ್ತು, ಈಗ ರಾಜ್ಯಾದಾದ್ಯಂತ 4380 ಮದ್ಯದಂಗಡಿಗಳಿದ್ದು ಅ.1 ರಿಂದ ಅದರ ಸಂಖ್ಯೆಯನ್ನು 3500ಕ್ಕೆ ಇಳಿಕೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಅಬಕಾರಿ ಸಚಿವ ನಾರಾಯಣಸ್ವಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆಂಧ್ರಾದ್ಯಂತ ಮದ್ಯವನ್ನು ನಿಷೇಧಿಸಲು ಸರ್ಕಾರವು ಕ್ರಮ ಕೈಗೊಂಡಿದ್ದು ಅಲ್ಲಲ್ಲಿ ಅಕ್ರಮವಾಗಿ 2872 ವೈನ್‍ಶಾಪ್‍ಗಳನ್ನು ಸ್ಥಾಪನೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕ ನಂತರ ಅವುಗಳ ಮೇಲೆ ದಾಳಿ ನಡೆಸಿ 2928 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಬಕಾರಿ ಸಚಿವರು ತಿಳಿಸಿದ್ದಾರೆ.