ಕೋಲಾರ: ಕೋಲಾರ ತಾಲೂಕಿನ ಖಾಜಿಕಲ್ಲಹಳ್ಳಿ ಗ್ರಾಮದ ಬಳಿಯ ಮಾಲೂರು ಅರಣ್ಯ ವಲಯದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ WRRC (Wildlife Rescue and Rehabilitation Centre) ಅವರು ಆನೆಗಳ ಆರೈಕೆ ಕೇಂದ್ರವನ್ನು ಸ್ಥಾಪನೆ ಮಾಡಿದ್ದಾರೆ. ಈ ಕೇಂದ್ರದಲ್ಲಿ ದುರ್ಗಾ, ಅನೀಶಾ, ಗೌರಿ ಹಾಗೂ ಜಾನುಮಣಿ ಎಂಬ ನಾಲ್ಕು ಹೆಣ್ಣಾನೆಗಳಿವೆ. ಬೆಂಗಳೂರಿನಿಂದ ದುರ್ಗಾ, ತಮಿಳುನಾಡಿನ ತೂತುಕುಡಿಯಿಂದ ಅನಿಶಾ, ನಂಜನಗೂಡಿನಿಂದ ಗೌರಿ ಹಾಗೂ ಗೋವಾದಿಂದ ಜಾನುಮಣಿ ಎಂಬ ಆನೆಗಳನ್ನು ಇಲ್ಲಿಗೆ ತಂದು ಆರೈಕೆ ಮಾಡಲಾಗುತ್ತಿದೆ. ಸದ್ಯ ನಾಲ್ಕು ಆನೆಗಳಿದ್ದು, ಮುಂದಿನ ದಿನಗಳಲ್ಲಿ ಇನ್ನೂ ನಾಲ್ಕು ಆನೆಗಳನ್ನು ತಂದು ಇಲ್ಲಿ ಆರೈಕೆ ಮಾಡುವ ಯೋಜನೆ ಹೊಂದಿದ್ದಾರೆ.
ಇನ್ನು ಪ್ರತೀ ದಿನ ಬೆಳಗ್ಗೆ ಒಂದೊಂದು ಆನೆಗೂ 25 ಕೆಜಿ ಹುಲ್ಲು ನೀಡಲಾಗುತ್ತದೆ. ಹಾಗೇ ರಾಗಿ ಮುದ್ದೆ, ಹಣ್ಣುಗಳು ಹಾಗೂ ಪೋಷಕಾಂಶಗಳಿರುವ ಆಹಾರವನ್ನು ಕೊಡಲಾಗುತ್ತದೆ. ಮತ್ತೆ ಮಧ್ಯಾಹ್ನ 3 ಗಂಟೆಗೆ ಭತ್ತ, ಕೊಬ್ಬರಿ, ಕುಚುರೆ, ಅವಲಕ್ಕಿ, ಮುದ್ದೆ ನೀಡಲಾಗುತ್ತೆ. ಇನ್ನು ಇಡೀ ರಾತ್ರಿ ಹುಲ್ಲನ್ನು ಹಾಕಲಾಗುತ್ತದೆ. ಒಂದು ಆನೆಗೆ ಒಂದು ದಿನಕ್ಕೆ ಒಟ್ಟು 150 ಕೆಜಿ ಹುಲ್ಲು ಹಾಗು 20 ಕೆಜಿಯಂತೆ ದಿನಕ್ಕೆ ಎರಡು ಬಾರಿ ಒಟ್ಟು 40 ಕೆಜಿ ಪೌಷ್ಠಿಕಾಂಶವುಳ್ಳ ರಾಗಿ ಮುದ್ದೆಯನ್ನು ನೀಡಲಾಗುತ್ತದೆ.
ಇನ್ನು ದಿನಕ್ಕೆರಡು ಬಾರಿ ಆನೆಗಳಿಗೆ ಸ್ನಾನ, ಬೆಳಗ್ಗೆ – ಸಂಜೆ ವಾಕಿಂಗ್ ಮಾಡಿಸಲಾಗುತ್ತದೆ. ಮುಖ್ಯವಾಗಿ ಅನಿಶಾ ಮತ್ತು ದುರ್ಗಾ ಆನೆಗಳು ಆರ್ಥ್ರೈಟಿಸ್, ಬಾರ್ಡರ್ ಲೈನ್ ಹಾಗೂ ಡಯಾಬಿಟಿಸ್ ನಿಂದ ಹೆಚ್ಚಾಗಿ ಬಳಲುತ್ತಿವೆ. ಹಾಗಾಗಿ ವೈದ್ಯರ ಸಲಹೆ ಮೇರೆಗೆ ಪ್ರತೀ ದಿನ ಎರಡು ಬಾರಿ ಆನೆಗಳಿಗೆ ಚಿಕಿತ್ಸೆ ಕೊಡಲಾಗುತ್ತದೆ. ಜಾಯಿಂಟ್ ನೀಡ್ ಎಂಬ ಒಂದು ಮೆಡಿಸನ್ ಗೆ ಒಂದು ಆನೆಗೆ 30 ಸಾವಿರ ರೂಪಾಯಿ ಖರ್ಚಾಗಲಿದೆ. ಒಂದು ತಿಂಗಳಿಗೆ ಒಂದು ಆನೆಗೆ ಸುಮಾರು ಒಂದೂವರೆಯಿಂದ ಎರಡು ಲಕ್ಷ ರೂಪಾಯಿ ಖರ್ಚು ಬರುತ್ತೆ ಎಂದು WRRC ಸಂಸ್ಥಾಪಕ ಟ್ರಸ್ಟಿಗಳಾದ ಡಾ.ಶೀಲಾರಾವ್ ಹಾಗೂ ಸುಪರ್ಣ ಗಂಗೂಲಿ ಅವರು ಮಾಹಿತಿ ನೀಡಿದರು.
ಆರೈಕೆ ಕೇಂದ್ರದಲ್ಲಿ ಒಟ್ಟು 9 ಮಂದಿ ಸಿಬ್ಬಂದಿ ಇದ್ದಾರೆ. ಅದರಲ್ಲಿ ಇಬ್ಬರು ವೈದ್ಯರು, ಐವರು ಮಾವುತರು, ಒಬ್ಬ ವೆಟರ್ನರಿ ಡಾಕ್ಟರ್ ಇದ್ದಾರೆ. ಆನೆಗಳ ಆರೈಕೆ ಕೇಂದ್ರವು ನಿಷೇಧಿತ ಪ್ರದೇಶವಾಗಿದ್ದು, ಸಾರ್ವಜನಿಕರಿಗೆ ಪ್ರವೇಶವಿಲ್ಲ. ಹಾಗೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಸುತ್ತಲೂ ವಿದ್ಯುತ್ ಬೇಲಿ ಯನ್ನು ಹಾಕಲಾಗಿದ್ದು, ಕೇಂದ್ರದ ಸುತ್ತಲೂ ಸುಮಾರು 18 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.