ಸುದ್ದಿ

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ನಗರ ಸಭೆ ಸಂಸ್ಥೆಗಳಿಗೆ 40 ಕೋಟಿ ರೂ. ಬಿಡುಗಡೆ…!

By admin

May 31, 2019

ರಾಜ್ಯದ ಬರಪೀಡಿತ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ 40 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.

ನಗರ ಸ್ಥಳೀಯ ಸಂಸ್ಥೆಗಳು, ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ರಚಿಸಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅವಶ್ಯವಿರುವ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ತಯಾರಿಸಿ, ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ತುರ್ತಾಗಿ ಅನುಷ್ಠಾನಗೊಳಿಸಬೇಕು. ಬಿಡುಗಡೆ ಮಾಡಿರುವ ಅನುದಾನದಡಿ ಕೊಳವೆ ಬಾವಿಗಳನ್ನು ಆಳಗೊಳಿಸುವ, ಸ್ವಚ್ಛಗೊಳಿಸುವುದು ಹಾಗೂ ಹೈಡ್ರೋಫ್ರಾಕ್ಚರಿಂಗ್ ಕೈಗೊಳ್ಳುವುದು. ನೀರು ಸರಬರಾಜು ಪೈಪುಗಳ ದುರಸ್ಥಿ-ಬದಲಾವಣೆ ಕಾಮಗಾರಿಗಳು ಮತ್ತು ಅತ್ಯವಶ್ಯಕತೆಯಿದ್ದಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಹಾಗೂ ಪಂಪು ಮೋಟಾರ್ ಅಳವಡಿಸುವ ಕಾಮಗಾರಿಗಳನ್ನು ಮಾತ್ರ ಈ ಅನುದಾನದಡಿ ಕೈಗೆತ್ತಿಕೊಳ್ಳಲು ಹಾಗೂ ಅನುಮೋದನೆ ನೀಡಿರುವ ಅನುದಾನವನ್ನು ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶಗಳಿಗೆ ಬಳಸಬಹುದಾಗಿದೆ.

ಇತರೆ ನಗರ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರು ಕಾಮಗಾರಿಗಳಿಗೆ ಅವಶ್ಯಕವಿರುವ ಪಂಪು, ಮೋಟಾರ್, ಪೈಪ್ಲೈನ್ ಮತ್ತು ಇತರೆ ಸಲಕರಣೆಗಳ ಸಂಗ್ರಹಣೆಯನ್ನು ನಿಯಮಾನುಸಾರ ಕೆಟಿಪಿಪಿ ಕಾಯಿದೆ 1999 ಮತ್ತು ನಿಯಮಗಳು 2000 ‍ರನ್ವಯ ಇ-ಪ್ರಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ಕೈಗೆತ್ತಿಕೊಳ್ಳುವಂತೆ ಸರ್ಕಾರ ಆದೇಶಿಸಿದೆ.

40 ಕೋಟಿ ರೂ. ಬಿಡುಗಡೆ ಮಾಡಲಾದ ಅನುದಾನವನ್ನು ಜಿಲ್ಲಾಧಿಕಾರಿಗಳು ತಮ್ಮ ಖಾತೆಯಲ್ಲಿ ಅನವಶ್ಯಕವಾಗಿ ಜಮಾಗೊಳಿಸಬಾರದು. ಖಜಾನೆಯಿಂದ ಹಣ ಪಡೆದು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಆದ್ಯತೆ ಮೇರೆಗೆ ಬಳಸಬೇಕು. ಹಾಗೂ ಅನುದಾನ ಬಳಕೆ ಸಂಬಂಧ ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕರು ಬಳಕೆ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿ, ಅನುದಾನ ಬಳಕೆ ಬಗ್ಗೆ ಖಚಿತಪಡಿಸಬೇಕು ಎಂದು ಆದೇಶಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.