ಸುದ್ದಿ

ನಿರ್ಮಾಣ ಪ್ರಗತಿಯಲ್ಲಿದ್ದ ನೀರಿನ ಟ್ಯಾಂಕ್ ಕುಸಿತ…..,7 ಇಂಜಿನಿಯರ್‌ಗಳು ಪೊಲೀಸರ ವಶಕ್ಕೆ….

By admin

July 08, 2019

ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಮೂವರು ಮೃತಪಟ್ಟು, 20ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತಪಟ್ಟವರ ಕುಟುಂಬಗಳಿಗೆ 5ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ಲುಂಬಿನಿ ಗಾರ್ಡನ್ ಸಮೀಪದ ಜೋಗಪ್ಪ ಲೇಔಟ್‌ನಲ್ಲಿ ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಬಿದ್ದಿತ್ತು. ಈ ಅವಘಡದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಬಿಬಿಎಂಪಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್, ಸಚಿವ ಕೃಷ್ಣ ಬೈರೇಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಜಲಮಂಡಳಿ ವತಿಯಿಂದ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುತ್ತದೆ’ ಎಂದು ಸಚಿವರು ಹೇಳಿದರು.ಉತ್ತರ ಭಾರತ ಮತ್ತು ಉತ್ತರ ಕರ್ನಾಟಕ ಮೂಲದ ಕಾರ್ಮಿಕರು ನೀರಿನ ಟ್ಯಾಂಕ್ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಸುಮಾರು ಒಂದೂವರೆ ವರ್ಷದಿಂದ ನೀರು ಶುದ್ಧೀಕರಣ ಮಾಡುವ ಟ್ಯಾಂಕ್ ಕಾರ್ಯ ನಡೆಯುತ್ತಿತ್ತು

ಲುಂಬಿನಿ ಗಾರ್ಡನ್ ಸಮೀಪದ ಜೋಗಪ್ಪ ಲೇಔಟ್‌ನಲ್ಲಿ ನೀರು ಶುದ್ದೀಕರಣ ಮಾಡುವ ಮೂರು ಟ್ಯಾಂಕ್‌ಗಳನ್ನು ನಿರ್ಮಾಣ ಮಾಡುವ ಗುತ್ತಿಗೆಯನ್ನು ಎನ್ವರೋನ್ ಎಂಬ ಕಂಪನಿ ಪಡೆದಿತ್ತು. ನೀರಿನ ಟ್ಯಾಂಕ್ ಕುಸಿದ ಬಳಿಕ ಪೊಲೀಸರು ಗುತ್ತಿಗೆ ಪಡೆದಿದ್ದ ಕಂಪನಿಯ ವಿರುದ್ಧ ದೂರು ದಾಖಲು ಮಾಡಿಕೊಂಡಿದ್ದಾರೆ.ನೀರಿನ ಟ್ಯಾಂಕ್‌ ನಿರ್ಮಾಣಕ್ಕೆ ಹಾಕಲಾಗಿದ್ದ ಪೈಪ್ ಕುಸಿದು ಬಿದ್ದ ಕಾರಣ ಸೆಂಟ್ರಿಂಗ್ ಕುಸಿದು ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ. ಘಟನೆಗೆ ಗುತ್ತಿಗೆದಾರರೇ ಹೊಣೆ ಎಂದು ಅವರಿಂದಲೇ ಆದ ನಷ್ಟವನ್ನು ಪಡೆಯುಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.

ನೀರಿನ ಟ್ಯಾಂಕ್ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಇಂಜಿನಿಯರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಗುತ್ತಿಗೆದಾರನ ವಿರುದ್ಧ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ. ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದಿದ್ದರಿಂದ 3 ಜನರು ಮೃತಪಟ್ಟಿದ್ದಾರೆ. 20 ಜನರು ಕೊಲಂಬಿಯಾ ಏಷಿಯಾ ಮತ್ತು ಆಸ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಗಾಯಗೊಂಡಿರುವ ಕೆಲವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಜಲಮಂಡಳಿ ಭರಿಸಲಿದೆ.