ದುಬಾರಿ ಟ್ರಾಫಿಕ್ ದಂಡದಿಂದ ಸಾಕಷ್ಟು ಬದಲಾವಣೆಗಳಾಗಿದ್ದು, ದಂಡ ಕಟ್ಟೋ ಬದಲು ಟ್ರಾಫಿಕ್ ರೂಲ್ಸನ್ನ ಫಾಲೋ ಮಾಡಿಬಿಡೋಣ ಎಂದು ಜನರು ನಿರ್ಧರಿಸಿದಂತಿದೆ ಎನ್ನುತ್ತಿದೆ ಇತ್ತೀಚೆಗೆ ಬಂದ ಮಾಹಿತಿ.
ನೂತನ ಟ್ರಾಫಿಕ್ ನಿಯಮದಿಂದ ವಾಹನ ಸವಾರರು ಎಚ್ಚೆತ್ತಿದ್ದು, ದಂಡದಿಂದ ತಪ್ಪಿಸಿಕೊಳ್ಳಲು ಟ್ರಾಫಿಕ್ ನಿಯಮ ಪಾಲಿಸುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಅಲ್ಲದೇ, ಡ್ರಿಂಕ್ ಆ್ಯಂಡ್ ಡ್ರೈವ್ ಹಾಗೂ ಅಪಘಾತ ಪ್ರಕರಣ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ.
ನೂತನ ಟ್ರಾಫಿಕ್ ದಂಡ ಸಂಹಿತೆ ಜಾರಿಯಾಗಿ ಇಂದಿಗೆ ಒಂದು ತಿಂಗಳಾಗಿದ್ದು, ಸಂಗ್ರಹಿಸಿದ ದಂಡದ ಮೊತ್ತ ಹೆಚ್ಚಾಗಿದ್ದರೂ ಸಂಚಾರ ನಿಯಮ ಉಲ್ಲಂಘನೆ ಇಳಿಕೆಯಾಗಿದೆ. ಕಳೆದ ಒಂದು ತಿಂಗಳಿನಲ್ಲಿ ದಾಖಲಾದ ಸಂಚಾರ ಉಲ್ಲಂಘನೆ ಪ್ರಕರಣಗಳು 5,96,790. ಕಳೆದ ಒಂದು ತಿಂಗಳಿನಲ್ಲಿ ವಸೂಲಾದ ದಂಡ 10 ಕೋಟಿ 67 ಲಕ್ಷ ಆಗಿದೆ.
ಆಗಸ್ಟ್ ತಿಂಗಳಿನಲ್ಲಿ ದಾಖಲಾಗಿದ್ದ ಸಂಚಾರ ಉಲ್ಲಂಘನೆ ಪ್ರಕರಣಗಳು 8,45,929. ಆದ್ರೆ ಆಗಸ್ಟ್ ತಿಂಗಳಿನಲ್ಲಿ ವಸೂಲಾದ ದಂಡ 8 ಕೋಟಿ 75 ಲಕ್ಷ. ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಕಂಡಿದೆ.