ಉಪಯುಕ್ತ ಮಾಹಿತಿ

ರುಚಿಕರವಾದ ಹಯಗ್ರೀವ ಮಾಡುವ ವಿಧಾನ ಹೇಗೆ ಗೊತ್ತಾ.?

By admin

December 17, 2019

ಹಯಗ್ರೀವ ಹೆಚ್ಚಾಗಿ ಕರ್ನಾಟಕದ ಉಡುಪಿ ಪ್ರದೇಶದಲ್ಲಿ ಮಾಡುವ ಸಿಹಿತಿಂಡಿ. ಸಾಕಷ್ಟು ಜನರಿಗೆ ಪ್ರೀಯವಾದ ತಿನಿಸು ಎಂದರೆ ಹಯಗ್ರೀವ. ರುಚಿಯಾದ ಹಯಗ್ರೀವವನ್ನು ಮಾಡುವುದು ಬಹಳ ಸುಲಭ! ಹಬ್ಬ ಹರಿದಿನಗಳಲ್ಲಿ ಈ ಸಿಹಿಯನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಇದನ್ನು ಹೆಚ್ಚಾಗಿ ದೇವರ ನೈವೇದ್ಯಕ್ಕೆ ಇಡಲು ಮಾಡುತ್ತಾರೆ. ಹಯಗ್ರೀವ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನವನ್ನು ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು : ಕಡ್ಲೆ ಬೇಳೆ – 2 ಕಪ್‌‌‌, ತೆಂಗಿನ ತುರಿ – 1ಕಪ್‌, ಬೆಲ್ಲ – 1 ಕಪ್‌‌‌‌, ತುಪ್ಪ – 1 ಕಪ್‌‌‌ಏಲಕ್ಕಿ ಪುಡಿ – 1/2 ಸ್ಪೂನ್, ಗಸಗಸೆ – 1/4 ಕಪ್‌‌, ಗೋಡಂಬಿ – 1/4 ಕಪ್‌‌‌, ಬಾದಾಮಿ – 1/4ಕಪ್‌‌‌ಒಣದ್ರಾಕ್ಷಿ – 1/4 ಕಪ್‌‌‌.

ತಯಾರಿಸುವ ವಿಧಾನ

ಒಂದು ಬೌಲ್ನಲ್ಲಿ ಕಡಲೇ ಬೇಳೆಯನ್ನು ಹಾಕಿ. ಅದಕ್ಕೆ 2 ಕಪ್ ನೀರನ್ನು ಸೇರಿಸಿ ಅರ್ಧ ಗಂಟೆ ನೆನೆಯಲು ಬಿಡಿ. ನೆನೆಸಿಕೊಂಡ ಕಡಲೇ ಬೇಳೆಯನ್ನು ಕುಕ್ಕರ್‌ಗೆ ಹಾಕಿ. ಅರ್ಧ ಕಪ್ ನೀರನ್ನು ಸೇರಿಸಿ. 4-5 ಸೀಟಿ ಕೂಗಿಸಿ ಬೇಯಿಸಿ. ನಂತರ ಆರಲು ಬಿಡಿ. ಮುಚ್ಚಳವನ್ನು ತೆರೆದು, ಲಘು ಪ್ರಮಾಣದಲ್ಲಿ ಬೇಳೆಯನ್ನು ಅರೆದು ಒಂದೆಡೆ ಇಡಿ. ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಸೇರಿಸಿ ಬಿಸಿ ಮಾಡಿ. ತಕ್ಷಣವೇ ಅರ್ಧ ಕಪ್ ನೀರನ್ನು ಬೆರೆಸಿ. ಬೆಲ್ಲ ಸಂಪೂರ್ಣವಾಗಿ ಕರಗಲು, ಮಧ್ಯಮ ಉರಿಯಲ್ಲಿ 5-7 ನಿಮಿಷಗಳ ಕಾಲ ಕುದಿಸಿ. ಬೆಲ್ಲದ ಪಾಕಕ್ಕೆ ಬೇಯಿಸಿಕೊಂಡ ಬೇಳೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಗಸಗಸೆಯನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಿ, 3 ಟೇಬಲ್ ಚಮಚ ತುಪ್ಪವನ್ನು ಸೇರಿಸಿ. ಇವೆಲ್ಲವನ್ನು 15 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ, ಒಣದ್ರಾಕ್ಷಿ ಮತ್ತು ಒಣ ತೆಂಗಿನ ತುರಿಯನ್ನು ಸೇರಿಸಿ. ಪುನಃ 5 ಟೇಬಲ್ ಚಮಚ ತುಪ್ಪವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ. ಇದನ್ನು 2 ನಿಮಿಷ ಬೇಯಿಸಲು ಬಿಡಿ. ಈ ಮಧ್ಯೆ, ಒಂದು ಚಿಕ್ಕ ಪಾತ್ರೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಸೇರಿಸಿ ಬಿಸಿ ಮಾಡಿ, ಕತ್ತರಿಸಿಕೊಂಡ ಗೋಡಂಬಿಯನ್ನು ಹಾಕಿ 2 ನಿಮಿಷ ಹುರಿಯಿರಿ. ಅವು ಹುರಿದು ಹೊಂಬಣ್ಣಕ್ಕೆ ತಿರುಗಬೇಕು,ನಂತರ ಲವಂಗವನ್ನು ಸೇರಿಸಿ ಬೇಯಿಸಿದ ಗೋಡಂಬಿ ಮಿಶ್ರಣವನ್ನು ಬೆಲ್ಲ ಮತ್ತು ಬೇಳೆಯ ಮಿಶ್ರಣಕ್ಕೆ ಸೇರಿಸಿ. ಏಲಕ್ಕಿ ಪುಡಿಯನ್ನು ಸೇರಿಸಿ, ಚೆನ್ನಾಗಿ ಬೆರೆಸಿ, ಬಿಸಿ ಇರುವಾಗಲೇ ಸವಿಯಲು ನೀಡಿ.

ಸಲಹೆ : ಕಡಲೇ ಬೇಳೆಯನ್ನು ನೆನೆಸಿಕೊಂಡರೆ ನುಣ್ಣಗೆ ಬೇಯುತ್ತದೆ. ಒಣಗಿದ ತೆಂಗಿನ ತುರಿ ಸೇರಿಸುವುದು ನಿಮ್ಮ ಆಯ್ಕೆ. ಗಸಗಸೆಯನ್ನು ಸೇರಿಸುವುದು ನಿಮ್ಮ ಆಯ್ಕೆಗೆ ಬಿಟ್ಟಿದ್ದು.ಕ್ಯಾಲೋರಿ – 256.9 ಕ್ಯಾಲ್ ಫ್ಯಾಟ್ – 11.4 ಗ್ರಾಂ. ಪ್ರೋಟೀನ್ – 21.1 ಗ್ರಾಂ. ಕಾರ್ಬೋಹೈಡ್ರೇಟ್ – 61 ಗ್ರಾಂ. ಸಕ್ಕರೆ – 24.8 ಗ್ರಾಂ. ಫೈಬರ್ – 6.2 ಗ್ರಾಂ.