ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಇನ್ನೆರಡು ದಿನ ಬಾಕಿ ಇರುವಂತೆಯೇ ಜೆಡಿಎಸ್ ಮುಖಂಡ ಸಿಎಸ್ ಪುಟ್ಟರಾಜು ಹೊಸ ಬಾಂಬ್ ಸಿಡಿಸಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಬಿಜೆಪಿ ಪಕ್ಷಕ್ಕೆ ಸೇರಲು ತಯಾರಿ ನಡೆಸಿದ್ದಾರೆ. ಈ ಕುರಿತ ವಿಡಿಯೋ ಸಿಡಿ ತಮ್ಮ ಬಳಿ ಇದ್ದು ಶೀಘ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಪುಟ್ಟರಾಜು ಅವರು, ‘ಖಾಸಗಿ ಹೋಟೆಲ್ವೊಂದರಲ್ಲಿ ಸುಮಲತಾ ಈಗಾಗಲೇ ಬಿಜೆಪಿ ಜತೆಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಬಿಜೆಪಿ ಸೇರಲು ಕೇಂದ್ರ ಸಚಿವ ಸ್ಥಾನವೂ ಬೇಡಿಕೆ ಇಟ್ಟಿದ್ದಾರೆ. ಈ ವಿಡಿಯೋ ಸಿಡಿ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದ್ದೇನೆ. ಸುಮಲತಾ ಅವರು ಬಿಜೆಪಿ ಸೇರಲಿದ್ದಾರೆ. ಈ ಬಗ್ಗೆ ಖಾಸಗಿ ಹೋಟೆಲ್ ನಲ್ಲಿ ಮಾತುಕತೆ ನಡೆಸಿರುವ ವಿಡಿಯೋ ನನ್ನ ಬಳಿಯಿದೆ. ಶೀಘ್ರದಲ್ಲಿಯೇ ಅದನ್ನು ಬಿಡುಗಡೆ ಮಾಡಲಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಸುಮಲತಾರನ್ನು ಬೆಂಬಲಿಸಿ ಎಂದು ಹೇಳಿದ್ದರು. ಈ ಹೇಳಿಕೆ ಬಳಿಕವೂ ಸುಮಲತಾ ಅವರು ಬಿಜೆಪಿ ಸೇರುವ ಕುರಿತು ಊಹಾಪೋಹಗಳು ಹರಿದಾಡಿದ್ದವು.
ಆದರೆ ಇದ್ಯಾವುದಕ್ಕೂ ಕ್ಯಾರೇ ಎನ್ನದ ಬಂಡಾಯ ಕಾಂಗ್ರೆಸ್ ನಾಯಕರು ಸುಮಲತಾ ಪರ ಕೆಲಸ ಮಾಡುತ್ತಲೇ ಇದ್ದಾರೆ. ಇದರಿಂದ ಬೇಸತ್ತ ದಿನೇಶ್ ಗುಂಡೂರಾವ್ ಅವರೇ ಖುದ್ದು, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಐವರನ್ನು ಕಾಂಗ್ರೆಸ್ನಿಂದ ಉಚ್ಚಾಟಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಸುಮಲತಾ ಅಂಬರೀಶ್ ಗೆದ್ದ ಮೇಲೆ ಬಿಜೆಪಿ ಸೇರುತ್ತಾರೆ ಎಂಬ ವದಂತಿಗೆ ಸ್ವತಃ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಹಿಂದೆಯೇ ಮಂಡ್ಯದ ಶಂಕರನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, ನಾನು ಈ ಮೊದಲೇ ಸ್ಪಷ್ಟಪಡಿಸಿದ್ದೀನಿ. ಯಾವುದೇ ಪಕ್ಷಕ್ಕೆ ಹೋಗಲ್ಲ. ವಿರೋಧಿಗಳು ದಿನಾ ಒಂದೊಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಒಂದು ದಿನ ಬಿಜೆಪಿ ಅಭ್ಯರ್ಥಿ, ನಿನ್ನೆ ಕಾಂಗ್ರೆಸ್ ಅಭ್ಯರ್ಥಿ ಅಂದರು. ಬೇಕಾದರೆ ಜೆಡಿಎಸ್ ಅಭ್ಯರ್ಥಿ ಎಂದೂ ಹೇಳುತ್ತಾರೆ. ನಾನು ಪಕ್ಷೇತರ ಅಭ್ಯರ್ಥಿಯಾಗಿದ್ದೇನೆ. ನನಗೆ ಯಾರು ಸಪೋರ್ಟ್ ಮಾಡುತ್ತಾರೋ ಅವರು ಯಾವುದೇ ಷರತ್ತು ಹಾಕದೆ ಬೆಂಬಲ ನೀಡುತ್ತಿದ್ದಾರೆ. ಗೆದ್ದರೆ ನನ್ನ ಕ್ಷೇತ್ರದ ಜನ ಯಾವ ಪಕ್ಷಕ್ಕೆ ಬೆಂಬಲ ನೀಡಿ ಎಂದು ಹೇಳುತ್ತಾರೆಯೋ ಅವರಿಗೆ ನಾನು ಬೆಂಬಲ ನೀಡುತ್ತೇನೆ ಎಂದು ಹೇಳಿದ್ದರು.