ಆತ್ಮಹತ್ಯೆ ಮಾಡಿಕೊಳ್ಳಲೆಂದು ನದಿಗೆ ಧುಮುಕಿದ ವ್ಯಕ್ತಿಯ ಹಣೆಬರಹದಲ್ಲಿ ದೈವ ಬೇರೆಯದ್ದೇ ಯೋಜನೆ ರೂಪಿಸಿದ್ದ. ಸಾಯಲೆಂದು ನದಿಗೆ ಧುಮುಕಿದ್ದ ಕೆಲವೇ ಕ್ಷಣಗಳಲ್ಲಿ ಆತನ ಮನಸ್ಸು ಬದಲಾಗಿತ್ತು. ನೀರಿಗೆ ಬಿದ್ದ ತಕ್ಷಣ ತಾನು ಬದುಕಬೇಕು ಎಂದೆನಿಸಿತ್ತಂತೆ.ಹೌದು, ಇಂತದ್ದೊಂದು ಘಟನೆ ಗುವಾಹಟಿಯಿಂದ ವರದಿಯಾಗಿದ್ದು, ರಭಸದಿಂದ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಲಕ್ಷ್ಮಣ್ ಸ್ವರ್ಗೀಯರಿ ಎಂಬಾತ ಧುಮುಕಿ ಆತ್ಮಹತ್ಯೆಗೆ ಮುಂದಾಗಿದ್ದ. ಆದರೆ ಆತನ ಮನಸ್ಸು ಬದಲಾಯಿತು. ನದಿಯ ಪ್ರವಾಹಕ್ಕೆ ಸಿಲುಕಿದ ಈತ 10 ಗಂಟೆಗಳಲ್ಲಿ 100 ಕಿ.ಮೀ. ದೂರಕ್ಕೆ ಸುರಕ್ಷಿತವಾಗಿ ತಲುಪಿದ್ದಾನೆ.
ಬಕ್ಸಾ ಜಿಲ್ಲೆಯ ತಾಮುಲ್ಪುರದ ಧುಲಬಾರಿಯ ನಿವಾಸಿಯಾಗಿದ್ದ 27 ವರ್ಷದ ಸ್ವರ್ಗೀಯರಿ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ತನ್ನ ದ್ವಿಚಕ್ರ ವಾಹನದಲ್ಲಿ ಗುವಾಹಟಿಯ ಸರೈಘಾಟ್ ಸೇತುವೆಯನ್ನು ತಲುಪಿದ್ದಾನೆ. ಪರ್ಸ್, ಮೊಬೈಲ್ ಫೋನ್, ಗುರುತಿನ ದಾಖಲೆಗಳು, ಚಪ್ಪಲಿ ಸೇರಿದಂತೆ ದ್ವಿಚಕ್ರ ವಾಹನವನ್ನು ಸೇತುವೆ ಮೇಲೆ ಬಿಟ್ಟು ಬ್ರಹ್ಮಪುತ್ರ ನದಿಗೆ ಹಾರಿದ್ದಾನೆ.ಕೂಡಲೇ ಆತ ನದಿಯ ಮೇಲೆ ತೇಲುತ್ತಿದ್ದ ನೀರಿನ ಜೊಂಡು ಮತ್ತು ಬಾಳೆ ಎಲೆಯನ್ನು ಗಮನಿಸಿದ್ದಾನೆ. ಅದನ್ನು ಹಿಡಿದು ಈಜಲು ಶುರುಮಾಡಿದ್ದಾನೆ. ರಾತ್ರಿಯಿಡೀ ಈಜುತ್ತಲೇ ಸಾಗಿದ್ದ ಈತನನ್ನು ಮರುದಿನ ಬೆಳಗ್ಗೆ ಅಸ್ಸಾಂನ ಬರ್ಪೇಟಾ ಜಿಲ್ಲೆಯ ಬೊಹೊರಿಯಲ್ಲಿನ ದೋಣಿಗಾರರು ರಕ್ಷಿಸಿದ್ದಾರೆ.
ಕಲಾಚಂದ್ ಅಲಿ ಎಂಬಾತ ದೋಣಿ ನಡೆಸುತ್ತಿದ್ದಾಗ ಬಟ್ಟೆಗಳಿಲ್ಲದೆ ನೀರಿನಲ್ಲಿ ತೇಲಿ ಬರುತ್ತಿದ್ದ ಸ್ವರ್ಗೀಯರಿಯನ್ನು ರಕ್ಷಿಸಿದ್ದಾನೆ. ನಾನು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆ. ಆಗ ಯಾರೋ ಸಹಾಯಕ್ಕಾಗಿ ಕೇಳುತ್ತಿದ್ದರು. ಕೊನೆಗೆ ಆತನನ್ನು ಪತ್ತೆ ಮಾಡಿ ದೋಣಿಯನ್ನು ಅವನ ಕಡೆಗೆ ತೆಗೆದುಕೊಂಡು ಅವನನ್ನು ರಕ್ಷಿಸಿದೆ ಎಂದು ಹೇಳಿದ್ದಾರೆ.
ದಡಕ್ಕೆ ಸೇರಿದ ನಂತರ ಆತನನ್ನು ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ಸೇರಸಲಾಗಿದ್ದು, ಆತ್ಮಹತ್ಯೆಗೆ ಮುಂದಾಗಿದ್ದು ಯಾಕೆ ಎನ್ನುವುದಕ್ಕೆ ಯಾವುದೇ ಕಾರಣವನ್ನು ತಿಳಿಸದ ಆತ ನನ್ನ ಜೀವನವನ್ನು ಕೊನೆಗೊಳಿಸಲು ನಾನು ಬಯಸಿದ್ದೆ. ಹಾಗಾಗಿ ನದಿಗೆ ಹಾರಿದೆ. ಆದರೆ ನಾನು ಸಾಯಲು ಆಗಲಿಲ್ಲ. ನೀರಿಗೆ ಬಿದ್ದ ತಕ್ಷಣ ನಾನು ಬದುಕಬೇಕು ಎನಿಸಿತು ಎಂದು ಸುದ್ದಿಗಾರರಿಗೆ ತಿಳಿಸಿದ್ದಾನೆ.