ಇನ್ಫೋಸಿಸ್ ದಂಪತಿ ನಾರಾಯಣ ಮೂರ್ತಿ, ಸುಧಾ ಮೂರ್ತಿ ಅವರ ಮಗನ ಮದುವೆ ಡಿ. 2ರಂದು ಬೆಂಗಳೂರಿನ ಹೋಟೆಲಿನಲ್ಲಿ ಸರಳವಾಗಿ ನಡೆಯಲಿದೆ. ಸುಧಾಮೂರ್ತಿ ಅವರ ಮಗ ರೋಹನ್ ಮೂರ್ತಿ ಅವರು ಕೇರಳದ ಕೊಚ್ಚಿ ಮೂಲದ ಅರ್ಪಣಾ ಕೃಷ್ಣನ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಮದುವೆ ಸರಳವಾಗಿ ನಡೆಯಲಿದ್ದು, ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರಿಗೆ ಆಹ್ವಾನ ನೀಡಲಾಗಿದೆ. ರೋಹನ್ ಹಾಗೂ ಅರ್ಪಣಾ ಸ್ನೇಹಿತರೊಬ್ಬರ ಮೂಲಕ ಮೂರು ವರ್ಷಗಳಿಂದ ಪರಿಚಯವಾಗಿದ್ದರು.
ಅರ್ಪಣಾ ನಿವೃತ್ತ ಎಸ್‍ಬಿಐ ಉದ್ಯೋಗಿ ಸಾವಿತ್ರಿ ಕೃಷ್ಣನ್ ಹಾಗೂ ಕಮಾಂಡರ್, ಮಾಜಿ ಭಾರತೀಯ ನೌಕಾಪಡೆ ಅಧಿಕಾರಿ ಕೆಆರ್ ಕೃಷ್ಣನ್ ಮಗಳು. ಶಾಲಾ ಶಿಕ್ಷಣವನ್ನು ಇಲ್ಲಿಯೇ ಪೂರ್ಣಗೊಳಿಸಿರುವ ಅರ್ಪಣಾ ಹೆಚ್ಚಿನ ಶಿಕ್ಷಣಕ್ಕಾಗಿ ಕೆನೆಡಾಗೆ ಹೋಗಿದ್ದರು. ಅರ್ಪಣಾ ಅಮೆರಿಕದ ಡಾರ್ಟ್ಮೌತ್ ಕಾಲೇಜಿನಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ. ಅರ್ಪಣಾ ಈಗ ಬೆಂಗಳೂರಿನ ನಿವಾಸಿಯಾಗಿದ್ದು, ಮೊದಲು ಮೆಕಿನ್ಸೆ ಹಾಗೂ ಸಿಕ್ವೊಯ ಕ್ಯಾಪಿಟಲ್‍ನಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ರೋಹನ್ ‘ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ’ವನ್ನು ಸ್ಥಾಪಿಸಿದ್ದರು. ರೋಹನ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, 2011ರ ಜೂನ್‍ನಲ್ಲಿ ಟಿವಿಎಸ್ ಮೋಟಾರ್ಸ್ ಅಧ್ಯಕ್ಷ ವೇಣು ಶ್ರೀನಿವಾಸ್ ಅವರ ಪುತ್ರಿ ಲಕ್ಷ್ಮಿ ವೇಣು ಅವರನ್ನು ಮದುವೆಯಾಗಿದ್ದರು. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ 2013 ರಿಂದ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ವರದಿಯಾಗಿತ್ತು.
2015ರ ಎಪ್ರಿಲ್ ನಲ್ಲಿ ರೋಹನ್- ಲಕ್ಷ್ಮಿ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. 2015ರ ನವೆಂಬರಿನಲ್ಲಿ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದರು. ಆದರೆ 2014ರ ಸೆಪ್ಟೆಂಬರ್‍ನಲ್ಲಿ ಲಕ್ಷ್ಮಿಯ ಸಹೋದರ ಸುದರ್ಶನ್ ಅವರ ವಿವಾಹ ಸಮಾರಂಭದಲ್ಲಿ ನಾರಾಯಣ ಮೂರ್ತಿ ಕುಟುಂಬ ಗೈರು ಹಾಜರಾದಾಗ ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಇರುವ ವಿಚಾರ ಬೆಳಕಿಗೆ ಬಂದಿತ್ತು.