ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ, ಖ್ಯಾತ ಲೇಖಕಿ ಹಾಗೂ ಜನಾನುರಾಗಿ ಸುಧಾ ಮೂರ್ತಿ ಅವರು ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿರುವ ‘ಕೌನ್ ಬನೇಗಾ ಕರೋಡ್‌ಪತಿ 11’ರ (ಕೆಬಿಸಿ) ಹಾಟ್ ಸೀಟ್ ಅಲಂಕರಿಸುತ್ತಿದ್ದು ಈ ಎಪಿಸೋಡ್ ಕಿರುತೆರೆ ವೀಕ್ಷಕರಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿದೆ. ಕೆಬಿಸಿ ಸೆಟ್‌ನಲ್ಲಿ ಬಿಗ್ ಬಿಯನ್ನು ಸುಧಾ ಮೂರ್ತಿ ಭೇಟಿಯಾಗಿರುವ ಫೋಟೋಗಳನ್ನು ಬಿಗ್ ಬಿ ತಮ್ಮ ಬ್ಲಾಗ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸುಧಾ ಮೂರ್ತಿ, “ನಾನು ಸಿನಿಮಾ ಪ್ರೇಮಿ ಹಾಗಾಗಿ ಅಮಿತಾಭ್ ಬಚ್ಚನ್ ಅವರಂತಹ ಮೇರು ಪ್ರತಿಭೆಯನ್ನು ಭೇಟಿಯಾಗಿದ್ದು ತುಂಬಾ ಖುಷಿಯಾಗಿದೆ. ಸೋಲು, ಗೆಲುವು ದೊಡ್ಡದಲ್ಲ, ನಾವು ಮಾಡುವ ಕೆಲಸದ ಮೂಲಕ ಜನರನ್ನು ತಲುಪುವುದು ನಮ್ಮ ಉದ್ದೇಶ ಮುಖ್ಯ” ಎಂದಿದ್ದಾರೆ.
ಇನ್ಫೋಸಿಸ್ ಪ್ರತಿಷ್ಠಾನದ ಜೊತೆಗೆ ಕಳೆದ 23 ವರ್ಷಗಳಿಂದ ತೊಡಗಿಕೊಂಡಿದ್ದೇನೆ. ಬರಗಾಲ, ನೆರೆ, ಸುನಾಮಿ ಹಾಗೂ ಭೂಕಂಪದಂತಹ ಪ್ರಾಕೃತಿಕ ವಿಕೋಪಗಳಿಗೆ ತುತ್ತಾದ ಜನರಿಗೆ ಸಹಾಯ ಮಾಡಿದ್ದೇವೆ. ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೂ ಕೆಲಸ ಮಾಡಿದ್ದೇವೆ. ಶಾಲೆ, ಆಸ್ಪತ್ರೆ, ಗ್ರಂಥಾಲಯಗಳ ಜತೆಗೆ ಮಧ್ಯಾಹ್ನದ ಬಿಸಿಯೂಟ ಸೌಲಭ್ಯವನ್ನು ಒದಗಿಸಿದ್ದೇವೆ.
ಹೈದರಾಬಾದ್ ಬಳಿ ಭಾರತದಲ್ಲೇ ಅತಿದೊಡ್ಡದಾದ ಅಡುಗೆ ಕೋಣೆಯನ್ನು ನಿರ್ಮಿಸಿದ್ದು ಅಲ್ಲಿ 1 ಲಕ್ಷ ಮಕ್ಕಳಿಗೆ ಊಟ ತಯಾರಾಗುತ್ತಿದೆ. ಅಕ್ಷಯಪಾತ್ರೆ ಊಟವನ್ನು ತಯಾರಿಸಲು ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿದ್ದೇವೆ” ಎಂದು ತಮ್ಮ ಸಾಮಾಜಿಕ ಕಾರ್ಯಗಳ ಬಗ್ಗೆ ನೆನಪಿಸಿದ್ದಾರೆ.