ಯಶ್ ಅಭಿನಯದ ಕೆಜಿಎಫ್ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಿ ಬಿರುಗಾಳಿಯಂತೆ ಮುನ್ನುಗ್ಗುತ್ತಿದೆ. ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಕನ್ನಡ ಚಿತ್ರರಂಗವನ್ನು ಮತ್ತೊಂದು ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡುಹೋಗಿರುವುದು ಸುಳ್ಳಲ್ಲ. ಈಗ ಕನ್ನಡ ಚಿತ್ರರಂಗದ ಸುದೀಪ್ ಅಭಿನಯದ ಮತ್ತೊಂದು ಬಹು ನಿರೀಕ್ಷಿತ ಚಿತ್ರ ಪೈಲ್ವಾನ್ ನೂತನ ದಾಖಲೆ ಬರೆಯಲು ಸಜ್ಜಾಗಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಐದು ಭಾಷೆಗಳಲ್ಲಿ ತೆರೆಕಂಡು ಧೂಳೆಬ್ಬಿಸುತ್ತಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಚಿತ್ರಕ್ಕೆ ಹೊಸ ಮಾರುಕಟ್ಟೆಯನ್ನು ಕೆಜಿಎಫ್ ಚಿತ್ರ ತೋರಿಸಿಕೊಟ್ಟಿದೆ. ಇದೀಗ ಮತ್ತೊಂದು ಬಹುಭಾಷಾ ಸಿನಿಮಾ ಅಷ್ಟೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗುತ್ತಿದ್ದು, ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಮುಖ್ಯಭೂಮಿಕೆಯಲ್ಲಿ ಮೂಡಿಬರುತ್ತಿರುವ ಪೈಲ್ವಾನ್ ಚಿತ್ರದ ಮೇಲೆ ದಿನದಿಂದ ದಿನಕ್ಕೆ ನಿರೀಕ್ಷೆಗಳು ದುಪ್ಪಟ್ಟಾಗುತ್ತಿವೆ.
ಹಾಲಿ ಸುದ್ದಿಮೂಲಗಳ ಅನ್ವಯ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ನೂತನ ದಾಖಲೆಯೊಂದಕ್ಕೆ ಪೈಲ್ವಾನ್ ಸಜ್ಜಾಗಿದ್ದು, ಪೈಲ್ವಾನ್ ಚಿತ್ರದ ಟಿವಿ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ ಇದೆ. ಹೌದು.. ಪೈಲ್ವಾನ್ ಚಿತ್ರವನ್ನು ಕಿರುತೆರೆಯಲ್ಲಿ ಪ್ರಸಾರ ಮಾಡಲು ದೇಶದ ದೊಡ್ಡ ದೊಡ್ಡ ಸಂಸ್ಥೆಗಳು ಆಫರ್ ನೀಡಲು ಮುಂದಾಗಿದ್ದು, ಎಲ್ಲಾ ಎಂಟು ಭಾಷೆಯಲ್ಲಿ ಚಿತ್ರವನ್ನು ಟಿವಿಯಲ್ಲಿ ಪ್ರಸಾರ ಮಾಡಲು ಪ್ರತಿಷ್ಠಿತ ಕಂಪನಿಯೊಂದು ಬರೋಬ್ಬರಿ 30 ಕೋಟಿ ಆಫರ್ ನೀಡಿದೆಯಂತೆ.
ಈ ಬಗ್ಗೆ ಸ್ವತಃ ಚಿತ್ರ ನಿರ್ದೇಶಕ ಕೃಷ್ಣ ಅವರು ಮಾಹಿತಿ ನೀಡಿದ್ದು, ಒಂದು ವೇಳೆ ಈ ಒಪ್ಪಂದ ಸಾಧ್ಯವಾಗಿದ್ದೇ ಆದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇಷ್ಟು ಬೃಹತ್ ಮೊತ್ತಕ್ಕೆ ಟಿವಿ ಹಕ್ಕು ಮಾರಾಟವಾದ ಮೊದಲ ಚಿತ್ರ ಎಂಬ ಖ್ಯಾತಿಗೆ ಪೈಲ್ವಾನ್ ಪಾತ್ರವಾಗಲಿದೆ.
ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಕೃಷ್ಣ ಅವರು, ‘ಚಿತ್ರದ ಸ್ಯಾಟಲೈಟ್ ಹಕ್ಕುಗಳಿಗೆ ಸಂಬಂಧಿಸಿದಂತೆ ಒಂದಷ್ಟು ಆಫರ್ ಬಂದಿವೆ. ಆಲ್ ಇಂಡಿಯಾ ಟಿವಿ ಹಕ್ಕುಗಳಿಗಾಗಿ 30 ಕೋಟಿ ಆಫರ್ ಬರುತ್ತಿದೆ..
ಕನ್ನಡ ಚಿತ್ರವೊಂದಕ್ಕೆ ಇದುವರೆಗೂ ಬಂದಿರುವ ಅತಿದೊಡ್ಡ ಟಿವಿ ರೈಟ್ಸ್ ಆಫರ್ ಇದಾಗಿದೆ. ಆದರೆ ನಾವು ಇನ್ನೂ ಫಿಕ್ಸ್ ಆಗಿಲ್ಲ. ಚಿತ್ರದ ಮೇಕಿಂಗ್ ಮತ್ತು ಸೆಟ್ ಗಳನ್ನ ನೋಡಿಯೇ ಈ ರೀತಿಯ ಆಫರ್ ಗಳನ್ನ ನೀಡುತ್ತಿದ್ದಾರೆ.. ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಮೊತ್ತಕ್ಕೆ ಆಫರ್ ಬರುವ ಭರವಸೆಯಿದೆ ಎಂದು ಹೇಳಿದ್ದಾರೆ.