ಈ ಬಾರಿಯ ಎಸ್‍ಎಸ್‍ಎಲ್ ಸಿ ಫಲಿತಾಂಶದಲ್ಲಿ ಹಾಸನ ಮೊದಲ ಸ್ಥಾನ ಪಡೆದಿದ್ದು, ಈ ಮೂಲಕ ಜಿಲ್ಲೆ ಹೊಸ ದಾಖಲೆ ಬರೆದಿದೆ.
ಹೌದು. ಫಲಿತಾಂಶದಲ್ಲಿ ಅರೆ ಮಲೆನಾಡು ರಾಜ್ಯದಲ್ಲೇ ನಂಬರ್ 1 ಸ್ಥಾನ ಪಡೆದಿದೆ. ಕಳೆದ ವರ್ಷ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 7ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ ಮೊದಲ ಸ್ಥಾನಕ್ಕೆ ಜಿಗಿದಿದೆ. ಈ ಮೂಲಕ ಹಾಸನ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹಿಂದಿಕ್ಕಿದೆ.
ಹಾಸನ ಪ್ರಥಮ ಸ್ಥಾನದ ಜೊತೆಗೆ ಹಾಸನದ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ನಗರದ ವಿಜಯ ಶಾಲೆಯ ಪ್ರಗತಿ ಹಾಗೂ ಅಭಿನ್ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ.
ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಪರಿಣಾಮ ಹಾಸನ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಕಳೆದ ಬಾರಿ ಶೇ.84.68 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರು. ಆದರೆ ಈ ಬಾರಿ ಶೇ 89.33 ರಷ್ಟು ಉತ್ತೀರ್ಣರಾಗಿದ್ದಾರೆ. ಒಟ್ಟಿನಲ್ಲಿ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅಚ್ಚರಿ ಫಲಿತಾಂಶ ಹೊರಬಿದ್ದಿದೆ.
ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿದ್ದು, ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು ಶೇ.73.70 ಫಲಿತಾಂಶ ದಾಖಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಶೇ.1.7ರಷ್ಟು ಏರಿಕೆಯಾಗಿದೆ.
ಶೇ.89.33 ಫಲಿತಾಂಶ ದಾಖಲಿಸುವ ಮೂಲಕ ಹಾಸನ ಮೊದಲ ಸ್ಥಾನ ಪಡೆದುಕೊಂಡರೆ, ಶೇ.88.49 ಫಲಿತಾಂಶ ದಾಖಲಿಸಿ ರಾಮನಗರ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.88.49 ಫಲಿತಾಂಶ ದಾಖಲಿಸುವ ಮೂಲಕ ಬೆಂಗಳೂರು ಗ್ರಾಮಾಂತರ ಮೂರನೇ ಸ್ಥಾನ ಪಡೆದುಕೊಂಡರೆ ಶೇ.53.95 ಫಲಿತಾಂಶದೊಂದಿಗೆ ಯಾದಗಿರಿ ಕೊನೆಯ ಸ್ಥಾನ ಪಡೆದುಕೊಂಡಿದೆ.