ಭಾನುವಾರ ರಜೆ ದಿನ. ಪ್ರತಿನಿತ್ಯ ಕೆಲಸ, ಶಾಲೆ ಎಂದು ಬ್ಯುಸಿಯಾಗಿರೋ ಕುಟುಂಬಸ್ಥರು ಮನೆಯಲ್ಲಿ ರೆಸ್ಟ್ ಮಾಡುತ್ತಾ ಇರುತ್ತಾರೆ. ಮಕ್ಕಳು ಸಹ ಇಂದು ಮನೆಯಲ್ಲಿಯೇ ಇರುತ್ತಾರೆ. ಎಲ್ಲರೂ ಒಟ್ಟಿಗೆ ಕುಳಿತು ರುಚಿ ರುಚಿಯಾದ ಮಸಲಾ ಚಾಟ್ಸ್ ತಿನ್ನೋ ಬಯಕೆ ಎಲ್ಲರಲ್ಲಿ ಮನೆ ಮಾಡಿರುತ್ತದೆ. ಹೊರಗಡೆ ತಂದ ತಿಂಡಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಮನೆಯಲ್ಲಿ ಏನು ಮಾಡಬೇಕೆಂದು ಚಿಂತೆಯಲ್ಲಿದ್ದೀರಾ. ಒಮ್ಮೆ ಸ್ಪೈಸಿ ಸೋಯಾ ಮಂಚೂರಿ ಮಾಡಿ ತಿನ್ನಿ. ಸ್ಪೈಸಿ ಸೋಯಾ ಮಂಚೂರಿ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವಸಾಮಾಗ್ರಿಗಳು* ಸೋಯಾ – 100 ಗ್ರಾಂ, * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಸ್ಪೂನ್, * ಹಸಿಮೆಣಸಿನಕಾಯಿ – 2-3* ಈರುಳ್ಳಿ – ಮಿಡಿಯಂ ಸೈಜ್, * ಸೋಯಾ ಸಾಸ್, * ಟೊಮೆಟೊ ಸಾಸ್, * ಜೋಳದ ಹಿಟ್ಟು (ಕಾರ್ನ್ ಫ್ಲೋರ್), * ಮೈದಾ ಹಿಟ್ಟು, * ಕ್ಯಾಪ್ಸಿಕಂ, * ಉಪ್ಪು, * ಎಣ್ಣೆ.
ಮಾಡುವ ವಿಧಾನ * ಒಂದು ಪಾತ್ರೆಗೆ ಸೋಯಾ ಹಾಕಿ ಸ್ವಲ್ಪ ಉಪ್ಪು ಹಾಕಿ ಐದರಿಂದ ಆರು ನಿಮಿಷ ಬೇಯಿಸಿ. ಒಂದು ಚೂರು ನೀರಿಲ್ಲದಂತೆ ಹಿಂಡಿ ಮಿಕ್ಸಿಂಗ್ ಬೌಲ್ ಗೆ ಹಾಕಿ. * ಮಿಕ್ಸಿಂಗ್ ಬೌಲ್ ಗೆ ಬೇಯಿಸಿದ ಸೋಯಾ, ಒಂದು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಒಂದು ಸ್ಪೂನ್ ಸೋಯಾ ಸಾಸ್, ಒಂದು ಸ್ಪೂನ್ ಟೊಮೆಟೋ ಸಾಸ್, 2 ಸ್ಪೂನ್ ಮೈದಾ, ಮೂರು ಸ್ಪೂನ್ ಜೋಳದ ಹಿಟ್ಟು ಹಾಕಿ ಚೆನ್ನಾಗಿ ಕಲಸಿ ಐದು ನಿಮಿಷಗಳ ಕಾಲ ತಟ್ಟೆ ಮುಚ್ಚಿಡಿ.
* ಈಗ ಎಣ್ಣೆ ಕಾಯಲು ಇಟ್ಟುಕೊಳ್ಳಿ. ಎಣ್ಣೆ ಬಿಸಿಯಾದ ಮೇಲೆ ಒಂದೊಂದು ಸೋಯಾವನ್ನು ಗೋಲ್ಡನ್ ಬ್ರೌನ್ ಬರೋವರೆಗೂ ಫ್ರೈ ಮಾಡಿ. * ಈಗ ಒಗ್ಗರಣೆಗೆ ಸ್ವಲ್ಪ ಎಣ್ಣೆ ಹಾಕಿ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಎರಡು ಹಸಿ ಮೆಣಸಿನಕಾಯಿ, ದಪ್ಪಗೆ ಹೆಚ್ಚಿದ ಈರುಳ್ಳಿ ಹಾಕಿ ಅರೆಬರೆ ಫ್ರೈ ಮಾಡಿ. * ಈಗ ಅದಕ್ಕೆ ಕ್ಯಾಪ್ಸಿಕಂ ಹಾಕಿ ಅದಕ್ಕೆ ಒಂದು ಸ್ಪೂನ್ ಸೋಯಾ ಸಾಸ್, ಟೊಮೆಟೋ ಸಾಸ್, ರುಚಿ ಹೆಚ್ಚಿಸಲು ಪೆಪ್ಪರ್ ಪೌಡರ್ ಸ್ವಲ್ಪ ಉಪ್ಪು ಸೇರಿಸಿ ಎರಡು ನಿಮಿಷ ಫ್ರೈ ಮಾಡಿ. * ಈಗ ಒಂದು ಸಣ್ಣ ಬಟ್ಟಲಿಗೆ ಜೋಳದ ಹಿಟ್ಟು ನೀರು ಹಾಕಿ ಪೇಸ್ಟ್ ಮಾಡಿ ಮಿಕ್ಸ್ ಮಾಡಿ. * ಅದು ಗಟ್ಟಿಯಾಗುತ್ತಿದ್ದಂತೆ ಕರಿದ ಸೋಯಾವನ್ನು ಮಿಕ್ಸ್ ಮಾಡಿ ಸವಿಯಿರಿ.