ಸುದ್ದಿ

ನೀವೆಂದಾದರೂ ಸಮುದ್ರದ ತೀರದಲ್ಲಿ ಈ ತರಹದ ಮೊಟ್ಟೆಗಳನ್ನು ಕಂಡಿದ್ದೀರಾ..? ಏನಿದು ಗೊತ್ತೇ..?

By admin

November 09, 2019

ಮಿನುಗುವ ಮುತ್ತುಗಳು ಸಮುದ್ರ ತೀರದಲ್ಲಿ ಬಿದ್ದಿದ್ದಾವೋ ಏನೋ ಎಂಬಂತೆ ಕಾಣುವ ದೃಶ್ಯ.ಪ್ರಕೃತಿ ದೇವಿಯೇ ಮುತ್ತನ್ನು ಪೋಣಿಸಿ ಹಾಸಿಗೆ ಮಾಡಿದ್ದಾಳೋ ಏನೋ ಎಂಬಂತಹ ನೋಟ…ಎಂತಹವರನ್ನೂ ಅರೆಕ್ಷಣದಲ್ಲಿ ಸೆಳೆದು ಬಿಡುವಂತಹ ಸೊಬಗು.ಈ ಸೌಂದರ್ಯ `ರಾಶಿ’ಗೆ ಸಾಕ್ಷಿಯಾಗಿದ್ದು ಫಿನ್‌ಲ್ಯಾಂಡಿನ ಮರ್ಜಾನಿಯೆಮಿ ಕಡಲತೀರ.

ಇಷ್ಟು ದಿನ ಮರಳಿಂದ ಆವೃತ್ತವಾಗಿದ್ದ ಈ ಬೀಚ್ ಮೊನ್ನೆ ಸಾವಿರಾರು `ಹಿಮದ ಮೊಟ್ಟೆ’ಗಳ ಹಾಸಿನಿಂದ ಅಚ್ಚರಿಗೆ ಕಾರಣವಾಗಿತ್ತು. ಸುಮಾರು 30 ಮೀಟರ್ ಅಂದರೆ 10 ಅಡಿಯಷ್ಟು ಪ್ರದೇಶದಲ್ಲಿ ಈ ಮೊಟ್ಟೆಗಳ ರಾಶಿ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ಇದನ್ನು ಕಂಡು ಜನ ಆಶ್ಚರ್ಯಚಕಿತರಾಗಿದ್ದರು.

ರಿಸ್ಟೊ ಮಟಿಲಾ ಮತ್ತು ಅವರ ಪತ್ನಿ ಹೈಲುಟೊ ದ್ವೀಪದ ಮಾರ್ಜನಿಯೆಮಿ ಬೀಚಿನಲ್ಲಿ ನಡೆದುಕೊಂಡು ಹೋಗುವಾಗ ಇಂತಹ ದೃಶ್ಯವನ್ನು ಕಂಡಿದ್ದರು. ತಕ್ಷಣ ಇವರು ಈ ಸೊಬಗಿನ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಬೇರೆ ಬೇರೆ ಗಾತ್ರದ ಹಿಮದುಂಡೆಗಳು ಇಲ್ಲಿ ಬಿದ್ದು ಸೊಬಗಿನ ಲೋಕವನ್ನು ಸೃಷ್ಟಿಸಿದ್ದವು. ಮೊಟ್ಟೆ ಗಾತ್ರದಿಂದ ಹಿಡಿದು ಫುಟ್ಬಾಲ್ ಗಾತ್ರದ ಹಿಮದ ಚೆಂಡುಗಳು ಇಲ್ಲಿ ಜನರಿಗೆ ಕಾಣಸಿಕ್ಕಿದ್ದವು.

ಇದು ಬಲು ಅಪರೂಪದ ವಿದ್ಯಮಾನ. ವಾತಾವರಣದ ಸ್ಥಿತಿ ತುಂಬಾ ಚೆನ್ನಾಗಿದ್ದರೆ ಮಾತ್ರ ವರ್ಷದಲ್ಲಿ ಒಂದು ಸಲ ಇಂತಹ ದೃಶ್ಯವನ್ನು ನಾವು ಕಾಣಬಹುದು ಎಂಬುದು ಫಿನ್ನಿಷ್ ಹವಾಮಾನ ಸಂಸ್ಥೆಯ ಹಿಮ ತಜ್ಞ ಜೌನಿ ವೈನಿಯೋ ಅವರ ಅಭಿಮತ. ಸರಿಯಾದ ಪ್ರಮಾಣದ ಗಾಳಿಯ ಉಷ್ಣತೆ (ಶೂನ್ಯಕ್ಕಿಂತ ಕಡಿಮೆ, ಆದರೆ ಸ್ವಲ್ಪ ಮಾತ್ರ), ಸರಿಯಾದ ನೀರಿನ ತಾಪಮಾನ, ಆಳವಿಲ್ಲದ ಮತ್ತು ಅಲ್ಪ ಪ್ರಮಾಣದ ಇಳಿಜಾರಿನಂತಿರುವ ಮರಳಿನ ತೀರ ಹಾಗೂ ಶಾಂತ ಅಲೆಗಳಿದ್ದರೆ ಈ ಹಿಮದ ಮೊಟ್ಟೆಗಳು ಗೋಚರಿಸುತ್ತವೆ’ ಎಂದು ಇವರು ಹೇಳಿದ್ದಾರೆ.

ಸಮುದ್ರದ ನೀರಿನ ಮೇಲ್ಮೈನಲ್ಲಿ ಹಿಮ ರೂಪುಗೊಳ್ಳುವಾಗ ಸಣ್ಣ ಚೆಂಡಿನ ರೂಪ ತಾಳುತ್ತವೆ. ಈ ಮೊಟ್ಟೆಯಾಕಾರದ ಹಿಮ ಅಲೆಗಳೊಂದಿಗೆ ಸಾಗಿ ದಡದಲ್ಲಿ ಜಮಾಗೊಳ್ಳುತ್ತದೆ ಎಂದು ಇಲಿನಾಯ್ಸ್‌ ಸ್ಟೇಟ್ ಯೂನಿವರ್ಸಿಟಿಯ ಭೌಗೋಳಿಕ ಭೂವಿಜ್ಞಾನ ಪ್ರಾಧ್ಯಾಪಕ ಡಾ ಜೇಮ್ಸ್‌ ಕಾರ್ಟರ್ ತಿಳಿಸಿದ್ದಾರೆ.