ಸುದ್ದಿ

ನಿದ್ರೆ ಮಾಡೋಕೂ 13 ಲಕ್ಷ ರೂ ಸಂಬಳ ನೀಡುತ್ತಂತೆ ನಾಸಾ.., ಆದ್ರೆ ಕಂಡೀಷನ್ಸ್ ಅಪ್ಲೈ!

By admin

June 01, 2019

ನವದೆಹಲಿ: ಕೆಲಸ ಮಾಡುವ ವೇಳೆ ನಿದ್ರೆ ಮಾಡಿ ಸಾಕಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. ಆದರೆ ನಿದ್ರೆ ಮಾಡೋದೇ ಕೆಲಸವಾದ್ರೆ.. ಅದೂ ಅದಕ್ಕೆ ಲಕ್ಷ ಲಕ್ಷ ಸಂಬಳವಿದ್ರೆ..!ಇದು ಸಾಧ್ಯಾನಾ ಎಂದು ಮೂಗು ಮುರಿಯಬೇಡಿ.. ಖಂಡಿತಾ ಸಾಧ್ಯ. ಅದೂ ಕೂಡ ವಿಶ್ವದ ಪ್ರತಿಷ್ಠಿತ ಸಂಸ್ಥೆಯೊಂದು ನಿದ್ರೆ ಮಾಡುವವರಿಗೆ ಲಕ್ಷ ಲಕ್ಷ ರೂ ಸಂಬಳ ನೀಡುವುದಾಗಿ ಹೇಳಿದೆ, ಹೌದು ಅಧ್ಯಯನವೊಂದರ ನಿಮಿತ್ತ ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ನಿದ್ರೆ ಮಾಡುವವರಿಗೆ 13 ಲಕ್ಷ ರೂ ಸಂಬಳ ನೀಡುವುದಾಗಿ ಘೋಷಣೆ ಮಾಡಿದೆ. ಅಧ್ಯಯನವೊಂದರ ನಿಮಿತ್ತ ನಾಸಾ ಸಂಸ್ಥೆ ನಿದ್ರೆ ಮಾಡುವವರಿಗಾಗಿ ಶೋಧ ನಡೆಸುತ್ತಿದ್ದು, ಕೇವಲ 60 ದಿನ ನಿದ್ರೆ ಮಾಡಿದರೆ 13 ಲಕ್ಷ ರೂ ನೀಡುವುದಾಗಿ ಘೋಷಣೆ ಮಾಡಿದೆ.

ಇಷ್ಟಕ್ಕೂ ಏನಿದು ಅಧ್ಯಯನ?ಅಮೆರಿಕದ ನಾಸಾ ಸಂಸ್ಥೆ ಮಂಗಳ ಹಾಗೂ ಚಂದ್ರನಲ್ಲಿಗೆ ಮಾನವ ಸಹಿತ ಉಡಾವಣೆ ಯೋಜನೆ ಹಮ್ಮಿಕೊಂಡಿದ್ದು, ಇದರ ನಿಮಿತ್ತ ಹಲವು ಅಧ್ಯಯನಗಳನ್ನು ಕೈಗೊಂಡಿದೆ. ಅದರಂತೆ ಗುರುತ್ವಾಕರ್ಷಣೆಯಲ್ಲಿದ ಬಾಹ್ಯಾಕಾಶ ವಾತಾವರಣದಲ್ಲಿ ನಿದ್ರೆ ಮತ್ತು ಇತರೆ ಆರೋಗ್ಯ ಸಂಬಂಧಿ ವ್ಯತ್ಯಾಸಗಳನ್ನು ಕಂಡು ಹಿಡಿಯಲು ವಿಜ್ಞಾನಿಗಳು ಈ ಅಧ್ಯಯನ ನಡೆಸುತ್ತಿದ್ದಾರೆ. ಅಮೇರಿಕನ್ ಸ್ಪೇಸ್ ಏಜೆನ್ಸಿ ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ) ಜೊತೆ ಸೇರಿ ಕೃತಕ ಗುರುತ್ವದಲ್ಲಿ ನಿದ್ರೆ ಮಾಡುವ ಬಗ್ಗೆ ಸಂಶೋಧನೆ ನಡೆಸಲು ಮುಂದಾಗಿವೆ. ಇದಕ್ಕಾಗಿ ಕೃತಕ ಗುರುತ್ವಾಕರ್ಷಣೆಯಲ್ಲಿ 2 ತಿಂಗಳ ಕಾಲ ನಿದ್ರೆ ಮಾಡುವ ಜನರನ್ನು ನಾಸಾ ಹುಡುಕುತ್ತಿದೆ.

ಮೂಲಗಳ ಪ್ರಕಾರ ಈ ಸಂಶೋಧನೆಗೆ ನಾಸಾಗೆ 12 ಪುರುಷರು ಹಾಗೂ 12 ಮಹಿಳೆಯರ ಅವಶ್ಯಕತೆಯಿದೆ. ಅವರ ವಯಸ್ಸು 24ರಿಂದ 55 ವರ್ಷದೊಳಗಿರಬೇಕು ಎಂದು ತಿಳಿದುಬಂದಿದೆ. ಅಂತೆಯೇ ಈ ಕೆಲಸಕ್ಕೆ ನಾಸಾ, 12.81 ಲಕ್ಷ ರೂಪಾಯಿ ವೇತನ ಕೂಡ ನೀಡಲಿದೆ. ಜರ್ಮನ್ ಏರೋಸ್ಪೇಸ್ ಸೆಂಟರ್ ನಲ್ಲಿ ಈ ಸಂಶೋಧನೆ ನಡೆಯಲಿದ್ದು, ಈ ಸಂಶೋಧನೆಯಲ್ಲಿ ನಿದ್ರೆ ಜೊತೆ ಅವರ ಚಟುವಟಿಕೆಗಳ ಮೇಲೆ ಗಮನ ಹರಿಸಲಾಗುವುದು. ಈ ಅಧ್ಯಯನದ ವೇಳೆ ಪ್ರಯೋಗ, ಆಹಾರ ಇತ್ಯಾದಿಗಳ ಮೇಲೆ ವಿಜ್ಞಾನಿಗಳು ಗಮನ ಕೇಂದ್ರೀಕರಿಸಲಿದ್ದಾರೆ.

ಈ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕೆಲಸ ಮಾಡಿ ಬಂದ ಸಾಕಷ್ಟು ಬಾಹ್ಯಾಕಾಶ ವಿಜ್ಞಾನಿಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಮೂಳೆಯ ಸಮಾರ್ಥ್ಯ ಕುಂಠಿತ, ಹೃದಯದ ಮೇಲಿನ ಒತ್ತಡದಂತಹ ಸಮಸ್ಯೆಗಳು ಕಂಡುಬಂದಿದ್ದವು. ಇಂತಹ ಸಮಸ್ಯೆಗಳು ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲೆಂದೇ ನಾಸಾ ಈ ಅಧ್ಯಯನ ನಡೆಸುತ್ತಿದೆ ಎನ್ನಲಾಗಿದೆ.