ಕೋಲಾರ: ನಾನು ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಕೋಲಾರದ ಜೂನಿಯರ್ ಕಾಲೇಜು ಮೈದಾನದಲ್ಲಿ ಇಂದು ನಡೆದ ಕೋಲಾರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,
ನನಗೆ ಸ್ಪರ್ಧಿಸಲು ಸರಿಯಾದ ಕ್ಷೇತ್ರವೇ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ವರುಣಾದಿಂದ ಮತ್ತೆ ಸ್ಪರ್ಧೆ ಮಾಡಿ ಎಂದು ಹೇಳುತ್ತಿದ್ದಾರೆ, ಬಾದಾಮಿ ದೂರ ಆಯ್ತು ಎಂಬ ಕಾರಣಕ್ಕೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ ಎಂದಿದ್ದಕ್ಕೆ ನಿಮಗಾಗಿ ನಾವು ಒಂದು ಹೆಲಿಕಾಪ್ಟರನ್ನೇ ಖರೀದಿ ಮಾಡಿ ಕೊಡುತ್ತೇವೆ, ನೀವು ಅದರಲ್ಲೇ ವಾರಕ್ಕೊಮ್ಮೆ ಬಂದು ಹೋದರೆ ಸಾಕು, ಇಲ್ಲೇ ನಿಲ್ಲಿ ಎನ್ನುತ್ತಿದ್ದಾರೆ. ಕೋಲಾರದಲ್ಲಿ ಜನ ಮತ್ತು ಕ್ಷೇತ್ರದ ಹಾಲಿ ಶಾಸಕರಾದ ಶ್ರೀನಿವಾಸ ಗೌಡ ಅವರು ನೀವು ಇಲ್ಲಿಂದ ಸ್ಪರ್ಧೆ ಮಾಡಿದರೆ ನಾನು ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡದೆ ನಿಮಗೆ ಬೆಂಬಲ ನೀಡುತ್ತೇನೆ ಎನ್ನುತ್ತಿದ್ದಾರೆ ಎಂದರು.
ಇಲ್ಲಿನ ಜನರ ಪ್ರೀತಿ ಅಭಿಮಾನವನ್ನು ನಾನು ತಿರಸ್ಕಾರ ಮಾಡಲಾರೆ. ಆದರೆ ನಾನು ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ. ಆದರೆ ಹೈಕಮಾಂಡ್ ನ ಅನುಮತಿ ಮೇರೆಗೆ ನನ್ನ ಸ್ಪರ್ಧೆ ನಿರ್ಧಾರವಾಗಲಿದೆ. ಸಿದ್ದರಾಮಯ್ಯ ಎಂಬ ಕಾರಣಕ್ಕೆ ಪಕ್ಷದಲ್ಲಿ ನನಗೊಬ್ಬನಿಗೇ ವಿಶೇಷ ಅವಕಾಶ, ಸೌಲಭ್ಯ ಇಲ್ಲ, ಪಕ್ಷದಲ್ಲಿ ಯಾರೇ ಆಗಲಿ ಎಲ್ಲರೂ ಹೈಕಮಾಂಡ್ ನ ಅನುಮತಿ ಪಡೆದು ಸ್ಪರ್ಧೆ ಮಾಡಬೇಕು. ಅದರಂತೆ ನನಗೂ ಹೈಕಮಾಂಡ್ ಅನುಮತಿ ನೀಡಿದರೆ ಇಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಕೆ.ಹೆಚ್ ಮುನಿಯಪ್ಪ ಅವರ ಆದಿಯಾಗಿ ಕೋಲಾರ ಜಿಲ್ಲೆಯ ಎಲ್ಲಾ ನಾಯಕರು ಇಲ್ಲಿಂದಲೇ ಸ್ಪರ್ಧೆ ಮಾಡಬೇಕು ಎಂದು ನನಗೆ ಒತ್ತಾಯ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕೋಲಾರಕ್ಕೆ ಬಂದು ದೇವಾಲಯಗಳಿಗೆ, ಮಸೀದಿಗಳಿಗೆ, ಚರ್ಚ್ ಗಳಿಗೆ ಭೇಟಿ ನೀಡಿ, ಪೂಜೆ ಪ್ರಾರ್ಥನೆ ಸಲ್ಲಿಸಿ, ಎಲ್ಲಾ ಧರ್ಮಗುರುಗಳೊಂದಿಗೆ ಮಾತನಾಡಿದ್ದೇನೆ, ಅವರೆಲ್ಲರೂ ನೀವು ಕೋಲಾರ ಕ್ಷೇತ್ರದಿಂದಲೇ ಸ್ಪರ್ಧಿಸಿ ಎಂದು ಹೇಳಿದ್ದರು. ಕೋಲಾರ ಕ್ಷೇತ್ರದ ಜನತೆ ಕೂಡ ಇಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸುವಂತೆ ಪ್ರೀತಿಯಿಂದ ಕರೆಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.