ಈಗಾಗಲೇ ನಗರದಲ್ಲಿ ವಿದ್ಯುತ್ ತಗಲಿ ಮಕ್ಕಳು ಸೇರಿದಂತೆ ವಯಸ್ಕರು ಮೃತಪಟ್ಟಿದ್ದಾರೆ. ಇಂದು ಕೂಡ ವಿದ್ಯುತ್ ತಗಲಿ ಮತ್ತೊಬ್ಬ ಬಾಲಕ ಮೃತಪಟ್ಟಿದ್ದಾನೆ.
ಬೆಂಗಳೂರಿನ ಜೆ.ಪಿ ನಗರದ ಜಂಬೂಸವಾರಿ ದಿಣ್ಣೆ ಬಳಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮುನಿರಾಜು ಎಂಬವರ ಪುತ್ರ ಅಕ್ಷಯ್ (8) ಮೃತ ದುರ್ದೈವಿ. ಬಾಲಕ ಸೆಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಸ್ನೇಹಿತರ ಜೊತೆ ಆಟವಾಡುತ್ತಿದ್ದನು.
ಈ ವೇಳೆ ಸ್ಟೇರ್ ಕೇಸ್ ಹತ್ತುವಾಗ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಕ್ಷಯ್ ಇಂದು ಮೃತಪಟ್ಟಿದ್ದಾನೆ. ಶಾಲಾ ಮಂಡಳಿ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ ಬೆಸ್ಕಾಂ ನಿರ್ಲಕ್ಷ್ಯಕ್ಕೆ ಎಲ್‍ಆರ್ ಬಂಡೆಯಲ್ಲಿ ಆಟವಾಡುತ್ತಿದ್ದ ಬಾಲಕ ವಿಕ್ರಂ, ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದನು. ನಂತರ ಮತ್ತಿಕೆರೆಯ ನೇತಾಜಿ ಸರ್ಕಲ್ ಬಳಿ ವಿದ್ಯುತ್ ತಗುಲಿ ಲಿಖಿಲ್(14) ಮೃತಪಟ್ಟಿದ್ದನು.