ಸುದ್ದಿ

ಪ್ರಾಣಿಗಳು ವಾಸಿಸುವ ಗುಹೆಯೊಳಗೆ ಶಿವಲಿಂಗದ ದರ್ಶನ, ಶಿವಭಕ್ತರ ಯಾತ್ರೆ! ಕರಾವಳಿಯಲ್ಲೊಂದು ವಿಶೇಷ ಗುಹಾ ದೇವಾಲಯ…!

By admin

July 23, 2019

ಹಿಂದೂ ಸಂಸ್ಕೃತಿ ಎಂದರೆ ಜಗತ್ಪ್ರಸಿದ್ಧ ಸಂಸ್ಕೃತಿ ಎಂಬುದರಲ್ಲಿ ಸಂಶಯವಿಲ್ಲ. ‌ಹಿಂದೂ ಧರ್ಮದ ಆಚರಣೆಗಳು ಯಾವ ರೀತಿ ಜಗತ್ತು ಒಪ್ಪಿಕೊಂಡಿವೆ ಎಂದರೆ ಮನುಷ್ಯರು ಮಾತ್ರವಲ್ಲದೆ ಇಡೀ ಪ್ರಕೃತಿಯೇ ಸನಾತನ ಧರ್ಮದ ಆಚರಣೆಗೆ ಒಳಪಡುತ್ತದೆ. ಕಣ ಕಣದಲ್ಲೂ ದೇವರನ್ನು ಕಾಣುವ ಹಿಂದೂ ಧರ್ಮ, ಕಲ್ಲು, ಮಣ್ಣು, ನೀರು, ಬೆಂಕಿ, ಪ್ರಾಣಿ ಪಕ್ಷಿ, ಗಿಡ ಮರ, ಹೀಗೆ ಎಲ್ಲಾ ಜೀವಿಗಳಲ್ಲೂ ದೇವರನ್ನು ಕಾಣುವ ಧರ್ಮ ಒಂದಿದ್ದರೆ ಅದು ಹಿಂದೂ ಧರ್ಮ ಮಾತ್ರ ಎಂಬುದು ಸ್ಪಷ್ಟ. ಭೂಮಿಯ ಯಾವುದೇ ಮೂಲೆಗೆ ಹೋದರೂ ಅಲ್ಲಿ ಹಿಂದೂ ಧರ್ಮದ ದೇವಾಲಯ, ಗುಡಿಗಳು ನಮಗೆ ಸಿಗುತ್ತವೆ.

ದೇವಾಲಯದ ಇತಿಹಾಸ ಮತ್ತು ವಿಶೇಷತೆ!   :ನೆಲ್ಲಿತೀರ್ಥ ಹೆಸರಲ್ಲೇ ನಮಗೆ ಈ ದೇವಾಲಯದ ವಿಶೇಷತೆ ಏನೆಂಬುದನ್ನು ತಿಳಿಯಬಹುದು. ನೆಲ್ಲಿತೀರ್ಥ ದೇವಾಲಯ ಇರುವುದು ಮಂಗಳೂರು ನಗರದಿಂದ‌ ಕೇವಲ 17 ಕಿಮೀ ದೂರದಲ್ಲಿ ಇರುವ ಈ ದೇವಾಲಯ ಸುಮಾರು 500 ವರ್ಷಗಳ ಹಿಂದಿನ ಇತಿಹಾಸ ಹೊಂದಿದೆ. ಈ ದೇವಾಲಯದ ಪ್ರಮುಖ ದೇವರೆಂದರೆ ಶಿವ. ನೆಲ್ಲಿತೀರ್ಥ ಎಂಬ ಹೆಸರಿನಿಂದ ಈ ದೇವಾಲಯ ಜಗತ್ಪ್ರಸಿದ್ಧವಾದರೆ, ಸೋಮನಾಥ ದೇವಸ್ಥಾನ ಎಂದೂ ಕರೆಯಲಾಗುತ್ತದೆ. ಇದೊಂದು ಗುಹಾ ದೇವಾಲಯ ಆಗಿರುವುದರಿಂದ ಇಲ್ಲಿನ ಪೂಜೆ ಬಹಳ ವಿಶೇಷ. ಗುಹೆಯ ಹೊಸ ಭಾಗದಲ್ಲಿ ದೇವಾಲಯವಿದ್ದು, ಶಿವನ ಪೂಜೆ‌ ನಿತ್ಯ ನಡೆಯುತ್ತದೆ. ಅದೇ ರೀತಿ ಗುಹೆಯ ಒಳಗೂ ಕೂಡ ಒಂದು ದೊಡ್ಡ ಶಿವಲಿಂಗ ಸ್ಥಾಪನೆಯಾಗಿದ್ದು, ಭಕ್ತರು ಅಲ್ಲಿಗೂ ಹೋಗಿ ಪ್ರಾರ್ಥಿಸುವ ಅವಕಾಶ ಇದೆ.

ಈ ದೇವಾಲಯದ ಮತ್ತೊಂದು ವಿಶೇಷವೆಂದರೆ, ವರ್ಷದ ಆರು ತಿಂಗಳು ಗುಹೆ ತೆರೆದಿರುತ್ತಾರೆ ಮತ್ತು ಇನ್ನುಳಿದ ಆರು ತಿಂಗಳು ಗುಹೆಯ ಒಳಗೆ ಅರ್ಚಕರು ಅಥವಾ ಭಕ್ತರು ಯಾರಿಗೂ ಅವಕಾಶ ಇರುವುದಿಲ್ಲ. ಇಲ್ಲಿನ ನಂಬಿಕೆಯ ಪ್ರಕಾರ, ಮಳೆಗಾಲದ ಈ ತಿಂಗಳುಗಳಲ್ಲಿ ಗುಹೆಯ ಒಳಗೆ ನದಿ ನೀರಿನ ಹರಿವು ಇರುತ್ತದೆ ಎಂದು ಹೇಳಲಾಗುತ್ತದೆ ಮಾತ್ರವಲ್ಲದೆ ಈ ಆರು ತಿಂಗಳು ಈ ಗುಹೆಯಲ್ಲಿ ದೇವರು ವಾಸವಾಗಿರುತ್ತಾರೆ ಎಂಬುದು ನಂಬಿಕೆ. ಪುರಾಣದ ಉಲ್ಲೇಖದಂತೆ, ಈ ದೇವಾಲಯದಲ್ಲಿ ಜಾಬಾಲಿ ಋಷಿ ಮುನಿಗಳು ತಪಸ್ಸು ಮಾಡಿದ್ದರು ಮತ್ತು ಅವರು ಕೈಗೊಂಡ ತಪಸ್ಸಿಗೆ ಮೆಚ್ಚಿ ಸ್ವತಃ ಶಿವನೇ ಅನುಗ್ರಹ ನೀಡಿದ್ದ ಎಂಬುದು ಇತಿಹಾಸ. ಸದ್ಯ ಈ ಗುಹಾ ದೇವಾಲಯ ಭಕ್ತರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಒಂದು ಪುಣ್ಯ ಕ್ಷೇತ್ರವಾಗಿದೆ.

ಈ ದೇವಾಲಯ ಇರುವುದು ಒಂದು ಸಣ್ಣ ಹಳ್ಳಿಯಲ್ಲಿ, ಆದರೆ ಸದ್ಯ ಈ ಹಳ್ಳಿಯನ್ನೇ ನೆಲ್ಲಿತೀರ್ಥ ಎಂಬ ಹೆಸರಿನಿಂದ‌ ಕರೆಯಲಾಗುತ್ತಿದೆ. ಪ್ರಕೃತಿಯ ಮಡಿಲಲ್ಲೇ ಇರುವ ಈ‌ ದೇವಾಲಯ ನಿಜಕ್ಕೂ ಭಕ್ತರ ಮನದಲ್ಲಿ ಏಕಾಗ್ರತೆ ಮೂಡಿಸುವ ತಾಣವಾಗಿದೆ. ಈ ದೇವಾಲಯದ ಹೊರ ಭಾಗದಲ್ಲಿ “ನಾಗಪ್ಪ” ಎಂಬ ಕೆರೆ ಇದ್ದು, ಗುಹೆಯನ್ನು ಪ್ರವೇಶಿಸುವ ಮೊದಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಈ ಕೆರೆಯಲ್ಲಿ ಸ್ನಾನ ಮಾಡಿ ಹೋಗಬೇಕು ಎಂಬುದು ಸ್ಥಳ ಪುರಾಣ. ಗುಹೆಯ ಒಳಗೆ ಯಾವುದೇ ಲಿಂಗ ತಾರತಮ್ಯ ಇಲ್ಲದೆ ಮುಕ್ತ ಪ್ರವೇಶವಿದ್ದು, ಶುಚತ್ವ ಮತ್ತು ಮಡಿ ಕಾಪಾಡಬೇಕಾದ ಕರ್ತವ್ಯ ಭಕ್ತರದ್ದೇ ಆಗಿರುತ್ತದೆ. 5 ವರ್ಷದೊಳಗಿನ ಮಕ್ಕಳಿಗೆ ಗುಹೆಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಈ ಗುಹೆಯ ಮತ್ತೊಂದು ವಿಶೇಷವೆಂದರೆ ಗುಹೆಯ ಪ್ರವೇಶ ಭಾಗದಲ್ಲಿ ಭಕ್ತರು ನೇರವಾಗಿ ನಿಂತುಕೊಂಡು ಹೋಗಬಹುದು, ನಂತರದಲ್ಲಿ ಸ್ವಲ್ಪ ಬಗ್ಗಿ ನಡೆಯಬೇಕಾಗುತ್ತದೆ.‌ ಅದಾದ ನಂತರ ಸಂಪೂರ್ಣ ನೆಲಕ್ಕೆ ಸಮನಾಗಿ ಮಲಗಿ ಮಣ್ಣಿನಲ್ಲಿ ತೆವಳಿಕೊಂಡು ಹೋಗಬೇಕಾಗುತ್ತದೆ. ‌ಗುಹೆಯ ಒಳ ಭಾಗದಲ್ಲಿ ಕಲ್ಲಿನಿಂದ ನೀರು ಹರಿಯುತ್ತಿದ್ದು, ಇದು ನೆಲ್ಲಿ ಕಾಯಿಯ ಆಕಾರದಲ್ಲಿ ಕಾಣಿಸುತ್ತದೆ. ಇದೇ ಕಾರಣಕ್ಕೆ “ನೆಲ್ಲಿತೀರ್ಥ” ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಈ ಗುಹೆ ದಿನೇ ದಿನೇ ಬೆಳೆಯುತ್ತಲಿದ್ದು ಸದ್ಯ ಇರುವ ದೇವಾಲಯದ ಒಂದು ದಿಕ್ಕಿನಿಂದ‌ ಈ ಗುಹೆ ದೇವಾಲಯವನ್ನೇ ಆವರಿಸಿದೆ. ಕೆಲವರು ಹೇಳುವ ಪ್ರಕಾರ,          ಈ‌ ಗುಹೆಯ ಒಳಗೆ ಏಳು ಶಿವಲಿಂಗ ಇದೆ.‌ ಶಿವ ಭಕ್ತರು ಪೂಜಿಸುವ ಲಿಂಗವನ್ನು ಈ ಗುಹೆ ಬೆಳೆಯುತ್ತಾ ಹೋದಂತೆ ತನ್ನೊಳಗೆ ಸೇರಿಸಿಕೊಂಡಿದೆ ಎಂದು ಹೇಳುತ್ತಾರೆ.ನಿಜಕ್ಕೂ ಇದೊಂದು ಅಚ್ಚರಿ ಮೂಡಿಸುವ ದೇವಾಲಯವೇ ಆಗಿದೆ. ಒಂದೊಂದು ಕಥೆ ಪುರಾಣಗಳು ಒಂದೊಂದು ರೀತಿಯಾಗಿ ಹೇಳುತ್ತವೆ. ಇಲ್ಲಿನ ಅರ್ಚಕರು ಈ ಕ್ಷೇತ್ರದ ಸಂಪೂರ್ಣ ಕಥೆ ಹೇಳುತ್ತಾರೆ ಮತ್ತು ಅದರ ಆಧಾರದಲ್ಲಿ ನಾವು ಇಲ್ಲಿನ ಇತಿಹಾಸ ತಿಳಿಯಬಹುದಾಗಿದೆ. ಅದೇನೇ ಇರಲಿ ಶಿವನ‌ ಮಹಿಮೆ‌ ಯಾವ ರೀತಿ ಇದೆ ಮತ್ತು ಹಿಂದೂ ಪುರಾಣಗಳು ಯಾವ ರೀತಿ ಇದೆ ಎಂಬುದಕ್ಕೆ ಈ ಒಂದು ಗುಹಾ ದೇವಾಲಯವೇ ಸಾಕ್ಷಿ..!