ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ನೋಡಿಕೊಳ್ಳುವ ತಿರುವಂಕೂರ್ ದೇವಸ್ವಂ ಮಂಡಳಿ (ಟಿಡಿಬಿ) ತನ್ನ ನಿಲುವನ್ನು ಬದಲಾಯಿಸಿಕೊಂಡಿದ್ದು, ಸುಪ್ರೀಂ ಕೋರ್ಟ್ ತೀರ್ಪನ್ನು ಯಥಾವತ್ ಆಗಿ ಪಾಲಿಸುತ್ತೇವೆ ಎಂದು ತಿಳಿಸಿದೆ.
ಸುಪ್ರೀಂಕೋರ್ಟ್ ಮುಖ್ಯನಾಯಾಧೀಶ ರಂಜನ್ ಗೊಗೋಯ್ ಅವರ ನೇತೃತ್ವದ ಐದು ಜನ ನ್ಯಾಯಾಧೀಶರ ಪೀಠವು ಇಂದು ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತು ವಿಚಾರಣೆ ನಡೆಸಿತು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ, ನಾವು ನಮ್ಮ ನಿಲುವನ್ನು ಬದಲಾಯಿಸಿದ್ದೇವೆ. ಧರ್ಮ ಗ್ರಂಥದಲ್ಲಿ ಸ್ತ್ರೀಯರನ್ನು ಹೊರಗಿಡಬೇಕೆಂದು ಹೇಳಿಲ್ಲ. ಹೀಗಾಗಿ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಎಲ್ಲಾ ಸ್ತ್ರೀಯರಿಗೆ ಪ್ರವೇಶಕ್ಕೆ ಅವಕಾಶ ನೀಡುತ್ತೇವೆ ಎಂದು ಹೇಳಿಕೆ ನೀಡಿದೆ.
ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ಕೊಡುವ ಸುಪ್ರೀಂಕೋರ್ಟ್ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ 54 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್, ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಹಾಗೂ ಇಂದೂ ಮಲ್ಹೋತ್ರಾ ಅವರ ಪೀಠವು ಮರಪರಿಶೀಲನಾ ಅರ್ಜಿಯನ್ನು ಇಂದು ವಿಚಾರಣೆ ನಡೆದಿದರು.
ಕೇರಳ ಸರ್ಕಾರದ ಅಧೀನದಲ್ಲಿ ನಡೆಯುವ ಶಬರಿಮಲ ದೇವಸ್ಥಾನ ಮಂಡಳಿಯು 2018 ಸೆಪ್ಟೆಂಬರ್ ನಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ವಿರೋಧಿಸಿತ್ತು. ಬಳಿಕ ನವೆಂಬರ್ ವರೆಗೆ ನಿರ್ಧಾರ ಕೈಗೊಳ್ಳಲು ಕಾಲಾವಕಾಶ ಕೇಳಿತ್ತು. ಆದರೆ ಈಗ ದೇವಸ್ಥಾನಕ್ಕೆ ಮಹಿಳೆಯರಿಗೆ ಯಾವುದೇ ವಯೋಮಿತಿ ಇಲ್ಲ. ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗುತ್ತದೆ ಎಂದು ಒಪ್ಪಿಕೊಂಡಿದೆ.