ಸರಿಗಮಪ ಸಂಗೀತ ಕಾರ್ಯಕ್ರಮದ ಮೂಲಕ ಕರುನಾಡಿನಲ್ಲಿ ಗಾಯಕ ಹನುಮಂತ ಚಿರಪರಿಚಿತರಾಗಿದ್ದಾರೆ. ಹಾವೇರಿ ಜಿಲ್ಲೆಯ ಗ್ರಾಮದಲ್ಲಿ ಕುರಿ ಕಾಯುತ್ತಿದ್ದ ಹನುಮಂತ ಅವರು ‘ಸರಿಗಮಪ’ ವೇದಿಕೆಯಲ್ಲಿ ಹಾಡುವ ಮೂಲಕ ನಾಡಿನಲ್ಲಿ ಮನೆ ಮಾತಾಗಿದ್ದಾರೆ.
ಮೊದಲ ಹಾಡಿನಿಂದ ಈವರೆಗೂ ಹನುಮಂತ ಹಾಡುವ ಪರಿ ನೋಡಿದರೆ ಸಾಕಷ್ಟು ಬದಲಾಗಿರುವುದು ಗಮನಕ್ಕೆ ಬರುತ್ತದೆ. ಹೊಸ ವರ್ಷ ಆರಂಭವಾಗುವ ಹೊಸ್ತಿಲಲ್ಲಿ ಹನುಮಂತನ ಪಾಲಿನ ಅದೃಷ್ಟದ ಬಾಗಿಲು ತೆರೆದಿದೆ. ಸಿನಿಮಾ ಸಂಗೀತಕ್ಕೆ ಹಿನ್ನೆಲೆ ಗಾಯಕನಾಗುವ ಅವಕಾಶ ಸಿಕ್ಕಿದೆ.
ಇದುವರೆಗೆ ಸರಿಗಮಪ ವೇದಿಕೆಯಲ್ಲಿ ಹಾಡುತ್ತಿದ್ದ ಹನುಮಂತನ ಬಗ್ಗೆ ನಿರ್ದೇಶಕ ಕಮ್ ಸಾಹಿತಿ ಯೋಗರಾಜ್ ಭಟ್ರು ಕೇಳಿದ್ದರು. ಆದರೆ ನೇರವಾಗಿ ಹನುಮಂತ ಹಾಡೋದನ್ನ ನೋಡಿರಲಿಲ್ಲ.
ಈ ವಾರ ಪ್ರಸಾರವಾದ ಸರಿಗಮಪ ಕಾರ್ಯಕ್ರಮದಲ್ಲಿ ಯೋಗರಾಜ್ ಭಟ್ ಮತ್ತು ಚಿತ್ರ ಸಾಹಿತಿಗಳಾದ ಜಯಂತ್ ಕಾಯ್ಕಿಣಿ, ವಿ.ನಾಗೇಂದ್ರ ಪ್ರಸಾದ್ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಅತಿಥಿಗಳ ಮುಂದೆ ಅಲ್ಲಾಡ್ಸು ಅಲ್ಲಾಡ್ಸು ಹಾಡು ಹೇಳಿ ಹನುಮಂತ ರಂಜಿಸಿದ್ದರು.
ನಿರ್ದೇಶಕ ಯೋಗರಾಜ ಭಟ್ ಹಾಗೂ ಸ್ಪರ್ಧಿ ಹನುಮಂತ ಅವರು ಹಾವೇರಿ ಜಿಲ್ಲೆಯವರಾಗಿದ್ದು, ‘ಸರಿಗಮಪ’ ವೇದಿಕೆಯಲ್ಲಿ ಹನುಮಂತ ಹಾಡುವುದನ್ನು ಕಂಡು ಫಿದಾ ಆದ ಯೋಗರಾಜ ಭಟ್ಟರು ತಮ್ಮ ಮುಂದಿನ ಚಿತ್ರದಲ್ಲಿ ಅವಕಾಶ ನೀಡುವುದಾಗಿ ಘೋಷಿಸಿದ್ದಾರೆ.
ಹೊಸ ವರ್ಷದ ಆರಂಭದಲ್ಲೇ ಹನುಮಂತನಿಗೆ ಅದೃಷ್ಟದ ಬಾಗಿಲು ತೆರೆದಿದ್ದು, ‘ಸರಿಗಮಪ’ ವೇದಿಕೆಯಲ್ಲಿ ಹಾಡುವಾಗಲೇ ಸಿನಿಮಾದಲ್ಲಿ ಹಿನ್ನಲೆ ಗಾಯಕನಾಗಲು ಅವಕಾಶ ದೊರೆತಿದೆ.