ಬೆಳ್ತಂಗಡಿಯಿಂದ ಆರು ಕಿ.ಮೀ. ಅಂತರದ ಕಾರ್ಕಳ ರಸ್ತೆಯಲ್ಲಿ ಬಂದರೆ ಬದ್ಯಾರ್ ಎಂಬಲ್ಲಿ ಇಳಿದು ಮತ್ತೆ ಒಂದು ಕಿ.ಮೀ. ಸಾಗಿದರೆ ಪುರಾತನವಾದ ಸಂತಾನ ಗೋಪಾಲಕೃಷ್ಣ ದೇವಸ್ಥಾನ ತಲುಪಬಹುದು. ಕರಾವಳಿಯಲ್ಲಿ ಇಂತಹ ದೇವಾಲಯವಿರುವುದು ಒಂದೆರಡು ಮಾತ್ರ. ಈ ಬಾರಿಯ ಜಾತ್ರೆ 2020ರ ಜನವರಿ ಇಂದ ನಡೆಯಲಿದೆ.
ಮಕ್ಕಳಿಲ್ಲದ ದಂಪತಿ ಇಷ್ಟಾರ್ಥ ಪ್ರಾಪ್ತಿಯಾದಾಗ ನಿರ್ಮಾಣ ಮಾಡಿದ್ದ ಈ ದೇವಾಲಯಕ್ಕೆ ಆರುನೂರು ವರ್ಷಗಳ ಇತಿಹಾಸವಿದೆ. ಚಾಲುಕ್ಯ ಶಿಲ್ಪ ಶೈಲಿಯ ವೇಣುಗೋಪಾಲನ ವಿಗ್ರಹ ಇಲ್ಲಿದೆ. ಪ್ರತ್ಯೇಕವಾಗಿ ದುರ್ಗೆ ಮತ್ತು ದೈವಗಳಿಗೂ ಆರಾಧನೆ ನಡೆಯುತ್ತದೆ. 2012ರಲ್ಲಿ ದೇವಾಲಯ ನಿರ್ಮಾಣ, ಬ್ರಹ್ಮಕಲಶಗಳು ನಡೆದ ಬಳಿಕ, ಇಲ್ಲಿಗೆ ಹರಕೆ ಹೇಳಿಕೊಂಡು ಅಸಂಖ್ಯ ಮಂದಿ ಬರುವುದು ವಿಶೇಷ. ಈ ಪೈಕಿ ವಿವಿಧ ಧರ್ಮದ ಭಕ್ತರು ಇದ್ದಾರೆ. ಹೀಗಾಗಿ, ಸರ್ವಧರ್ಮ ಸಮನ್ವಯದ ಕ್ಷೇತ್ರವಾಗಿದೆ. ಬ್ರಹ್ಮಕಲಶಕ್ಕೆ ಎಲ್ಲ ಧರ್ಮದವರು ಶಕ್ತಮೀರಿ ನೆರವಾಗಿದ್ದಾರೆ. ಎಲ್ಲರೂ ಇಲ್ಲಿನ ಅನ್ನದಾನವನ್ನು ಪ್ರಸಾದದಂತೆ ಸ್ವೀಕರಿಸುತ್ತಾರೆ.
ಶನಿವಾರ ಸಂಜೆ ಭಜನೆಯಿದೆ. ಪೌರ್ಣಮಿಗೆ ರಂಗಪೂಜೆ ಹಾಗೂ ಸತ್ಯನಾರಾಯಣ ಪೂಜೆಗಳಿವೆ. ನಿತ್ಯ ದೇವರಿಗೆ ಹಾಲುಪಾಯಸ ಸಮರ್ಪಣೆ ಕ್ಷೇತ್ರದ ವೈಶಿಷ್ಟ್ಯ. ಈ ಪ್ರಸಾದ ಸ್ವೀಕರಿಸುವ ಪಾರಿವಾಳಗಳ ಸಮೂಹವೇ ಬರುತ್ತದೆ.
ಗೋಕುಲಾಷ್ಠಮಿ ಇಲ್ಲಿನ ವಿಶೇಷ ಉತ್ಸವಗಳಲ್ಲಿ ಒಂದು. ಮಧ್ಯಾಹ್ನ ದೇವರಿಗೆ ಪೂಜೆಯಿದೆ. ಸಾರ್ವಜನಿಕರಿಗಾಗಿ ಕೃಷ್ಣ ದೇವರ ಲೀಲೋತ್ಸವದ ಪ್ರತೀಕವಾಗಿ ಮೊಸರು ಕುಡಿಕೆ, ಇನ್ನಿತರ ಗ್ರಾಮೀಣ ಕ್ರೀಡೆಗಳು, ಎಳೆಯ ಮಕ್ಕಳ ಬಾಲಕೃಷ್ಣ ವೇಷ ಸ್ಪರ್ಧೆಯಿರುತ್ತದೆ.
ಕಾರ್ತಿಕ ಪೌರ್ಣಮಿ ಲಕ್ಷ ದೀಪೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಧನುರ್ಮಾಸವಿಡೀ ನಸುಕಿನಲ್ಲಿ ಪೂಜೆ ನಡೆಯುತ್ತದೆ. ಸಿಹಿ ಹುಗ್ಗಿಯ ಪ್ರಸಾದ ನೀಡುತ್ತಾರೆ. ಪ್ರತಿ ಶನಿವಾರ ಇಲ್ಲಿ ಸಾಮೂಹಿಕ ಕೃಷ್ಣ ಅಷ್ಟೋತ್ತರ ಪಠಣ ನಡೆಯುತ್ತದೆ. ನೀವು ಸಹ ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ ನಿಮ್ಮ ಅಪೇಕ್ಷೆಗಳನ್ನು ಪೂರೈಸಿಕೊಳ್ಳಬಹುದು.