ಸ್ಯಾಂಡಲ್ವುಡ್ ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರು ವಂಚನೆ ಪ್ರಕರಣದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬುಧವಾರ ಡಿಸಿಪಿ ರವಿ ಕುಮಾರ್ ಕಚೇರಿಗೆ ಆಗಮಿಸಿದ ಅವರು 1.60 ಕೋಟಿ ರೂ. ವಂಚನೆ ವಿರುದ್ಧ ದೂರು ದಾಖಲಿಸಿದ್ದಾರೆ.
ಕನ್ನಡದಲ್ಲಿ ನಿರ್ಮಾಪಕ, ನಿರ್ದೇಶಕ, ನಟರಾಗಿ ಗುರುತಿಸಿಕೊಂಡಿರುವ ಎಸ್. ನಾರಾಯಣ್ ಅವರು ಕಳೆದ ವರ್ಷ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದರು. ಮೂವರು ನಿರ್ಮಾಪಕರು ಸೇರಿ ನಿರ್ಮಿಸಬೇಕಿದ್ದ ಆ ಸಿನಿಮಾದ ಮುಹೂರ್ತ ಕೂಡ ನೆರವೇರಿಸಲಾಗಿತ್ತು.
ಇದೇ ವೇಳೆ ಪಾಲುದಾರರು ಸಂಭಾವನೆ ಬದಲು ನಿವೇಶನ ಖರೀದಿಸುವಂತೆ ಎಸ್.ನಾರಾಯಣ್ ಅವರಿಗೆ ಸೂಚಿಸಿದ್ದರು. ಅಂತೆಯೇ ಬೆಂಗಳೂರಿನ ಹೆಚ್ಬಿ.ಆರ್ ಬಡಾವಣೆಯಲ್ಲಿ 1.60 ಕೋಟಿ ಮೌಲ್ಯದ ನಿವೇಶನ ಖರೀದಿಸಿದ್ದರು.
ಆದರೆ ಆ ಬಳಿಕ ನಿವೇಶನದ ದಾಖಲೆಗಳು ನಕಲಿ ಎಂಬುದು ಗೊತ್ತಾಗಿದೆ. ನಕಲಿ ದಾಖಲೆಗಳನ್ನು ನೀಡಿ ನನ್ನಿಂದ ವಂಚಕರು ಹಣ ಪಡೆದುಕೊಂಡಿದ್ದಾರೆ ಎಂದು ಎಸ್.ನಾರಾಯಣ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಒಂದೆಡೆ ಸಾಲದ ಸುಳಿಯಲ್ಲಿ ಸಿಲುಕಿರುವ ನಾರಾಯಣ್ ಅವರು ಸಾಲವನ್ನು ಹಿಂತಿರುಗಿಸಲು ಪರದಾಡುತ್ತಿದ್ದಾರೆ. ಈಗಾಗಲೇ 2 ಕೋಟಿಗೂ ಅಧಿಕ ಸಾಲ ಹೊಂದಿದ್ದು, ನಕಲಿ ದಾಖಲೆ ಮೂಲಕ ವಂಚಿಸಿದ ವಂಚಕರಿಂದ ನ್ಯಾಯ ಒದಗಿಸಿ ಕೊಡಿ ಎಂದು ಡಿಸಿಪಿ ಅವರ ಹತ್ತಿರ ಎಸ್.ನಾರಾಯಣ್ ಅವರು ಮನವಿ ಮಾಡಿಕೊಂಡಿದ್ದಾರೆ.