ಸುದ್ದಿ

ಹಾಸನದ ದೇವಾಲಯದಲ್ಲಿ ಪ್ರತಿ ಸೋಮವಾರ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಪೂಜೆ ನಡೆಯುವದಕ್ಕೆ ಕಾರಣವೇನು ಗೊತ್ತಾ?

By admin

November 23, 2019

ಪುರಾತನ ಮತ್ತು ಮುಜರಾಯಿ ಇಲಾಖೆಗೆ ಸೇರಿದ ಹಾಸನದ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಪ್ರತಿ ಸೋಮವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಅರ್ಚನೆ ಮಾಡಲಾಗುತ್ತದೆ.ಇದರ ಜೊತೆಗೆ ಅಧಿಕಾರಿಯ ಹೆಸರಿನಲ್ಲಿ ಮರ ಬೆಳೆಸಲಾಗುತ್ತಿದ್ದು ಪ್ರತಿದಿನ ಜಲಾಭಿಷೇಕ ಕೂಡ ನಡೆಯುತ್ತದೆ. ಈ ಪುರಾತನ ದೇವಾಲಯ ಶಿಥಿಲಾವಸ್ಥೆಗೆ ತೆರಳಿದ್ದರೂ ಯಾವ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗಮನಹರಿಸಲಿಲ್ಲ. ಆದರೆ ರೋಹಿಣಿ ಸಿಂಧೂರಿಯವರು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಣ ಬಿಡುಗಡೆ ಮಾಡಿದ್ದರು.

2017ರಲ್ಲಿ ಹಾಸನ ಜಿಲ್ಲಾಧಿಕಾರಿಯಾಗಿ ಬಂದ ರೋಹಿಣಿ ಸಿಂಧೂರಿ ದೇವಾಲಯದ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ತಕ್ಷಣ 30 ಲಕ್ಷ ಹಣ ಬಿಡುಗಡೆ ಮಾಡಿಸಿದ್ದರು. ಪರಿಣಾಮ ದೇವಾಲಯಕ್ಕೆ ವಿಶೇಷವಾದ ಮೇಲ್ಛಾವಣಿ, ನೆಲಹಾಸು ಮತ್ತು ವಿದ್ಯುತ್ ಸೌಕರ್ಯ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಯಿತು. ಅಂದಿನಿಂದ ಇಲ್ಲಿ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಇಲ್ಲಿ ಪ್ರತಿ ಸೋಮವಾರ ಅರ್ಚನೆ ಮಾಡಲಾಗುತ್ತದೆ.

ಗಿಡಗಂಟೆಗಳು ಬೆಳೆದು ಕಾಡಿನಂತಿದ್ದ ದೇವಾಲಯದ ಆವರಣದಲ್ಲಿ ವಿಶೇಷವಾದ ಮರಗಳಿದ್ದು ಅವುಗಳೊಂದಿಗೆ ರೋಹಿಣಿ ಸಿಂಧೂರಿ ಹೆಸರಿನಲ್ಲಿಯೂ ಸಹ ಒಂದು ಗಿಡವನ್ನು ನೆಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಿಂದಲೇ ಈ ಗಿಡವನ್ನು ತಂದು ದೇವಾಲಯದ ಆವರಣದಲ್ಲಿ ನೆಟ್ಟು ಪೋಷಣೆ ಮಾಡಲಾಗುತ್ತಿದೆ.

ಗಿಡಕ್ಕೆ ಪ್ರತಿದಿನ ದೇವಾಲಯದ ಪೂಜೆಯ ಅಭಿಷೇಕದ ನೀರನ್ನು ಹಾಕುತ್ತಾರೆ. ಪ್ರತಿ ಸೋಮವಾರ ಗಿಡಕ್ಕು ಸಹ ಅಭಿಷೇಕ ಮಾಡಲಾಗುತ್ತದೆ. ದೇವಾಲಯಕ್ಕೆ ತಮ್ಮ ತಾಯಿಯೊಂದಿಗೆ ಭೇಟಿ ನೀಡಿದ ಸಿಂಧೂರಿ ಅಂದು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಮಾಡಿದ ಒಂದು ಕೆಲಸ ಅವರನ್ನು ನೆನಪಿಸಿಕೊಳ್ಳುವಂತೆ ಮಾಡಿದೆ.