ಸುದ್ದಿ

ಚಾಲಕರಿಗೆ ದುಬಾರಿ ದಂಡ ವಿಧಿಸುವ ಬದಲು ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಒತ್ತು ನೀಡಿ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸವಾಲೆಸೆದ ಸ್ಯಾಂಡಲ್​ವುಡ್​ ನಟಿ..!

By admin

September 07, 2019

ದೇಶದಲ್ಲಿ ಜಾರಿಯಾದ ಹೊಸ ಟ್ರಾಫಿಕ್‌ ದಂಡದ ಕುರಿತಾಗಿ ಸಾಕಷ್ಟು ಚರ್ಚೆಗಳು, ಪರ-ವಿರೋಧದ ಮಾತುಗಳು ಕೇಳಿಬರುತ್ತಿದೆ. ಅದರಲ್ಲೂ ಹೊಂಡ-ಗುಂಡಿಗಳಿಂದ ತುಂಬಿರುವ ರಸ್ತೆಗಳನ್ನು ಸರಿಪಡಿಸುವ ಜವಾಬ್ದಾರಿ ಕೂಡಾ ಸರ್ಕಾರಕ್ಕೆ ಇದೆ.  ಸಂಚಾರ ನಿಯಮ ಉಲ್ಲಂಘಿಸಿದ ಬೈಕ್‌ ಸವಾರರು, ವಾಹನಗಳ ಚಾಲಕರಿಗೆ ದುಬಾರಿ ದಂಡ ವಿಧಿಸುವ ಬದಲು ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಒತ್ತು ನೀಡಿ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಟಿ ಸೋನು ಗೌಡ ಸವಾಲು ಹಾಕಿದ್ದಾರೆ.

ಜನಸಾಮಾನ್ಯರು ಕಷ್ಟಪಟ್ಟು ಹಣ ಸಂಪಾದಿಸುತ್ತಾರೆ. ಅಧಿಕ ದಂಡ ವಿಧಿಸಿ ಅವರ ಜೀವನವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಬೇಡಿ ಎಂದು ಟ್ವೀಟ್‌ ಮಾಡಿದ್ದಾರೆ. ಇಷ್ಟನ್ನು ಬರೆದು ಅವರು ಸುಮ್ಮನಾಗಿಲ್ಲ. ಸವಾರನೊಬ್ಬ ಗುಂಡಿಯಲ್ಲಿ ಆಯತಪ್ಪಿ ಬೈಕ್‌ ಸಮೇತ ನೆಲಕ್ಕೆ ಬಿದ್ದಿರುವ ಹಾಗೂ ಆತನನ್ನು ಮಹಿಳೆಯೊಬ್ಬರು ರಕ್ಷಿಸಲು ಮುಂದಾಗುತ್ತಿರುವ ಫೋಟೊವನ್ನೂ ಅಪ್‌ಲೋಡ್‌ ಮಾಡಿದ್ದಾರೆ.

ಆ ಫೋಟೊದಲ್ಲಿ ಕುಡಿದು ಚಾಲನೆಗೆ ₹ 10,000, ಜಂಪಿಂಗ್ ಟ್ರಾಫಿಕ್ ಲೈಟ್‌ಗೆ ₹ 5,000. ಮೊಬೈಲ್ ಫೋನ್ ಬಳಕೆಗೆ ₹ 5,000, ಅತಿವೇಗಕ್ಕೆ ₹ 5,000 ಹಾಗೂ ಸೀಟ್‍ಬೆಲ್ಟ್ ಧರಿಸದಿದ್ದರೆ ₹ 1,000 ದಂಡ ವಿಧಿಸಲಾಗುತ್ತದೆ. ಸವಾರರಿಗೆ ಗುಂಡಿಗಳಿಂದ ತೊಂದರೆಯಾದರೆ ಹೊಣೆ ಯಾರು? ಆ ಗುಂಡಿಗಳಿಂದ ತೊಂದರೆ ಅನುಭವಿಸುವ ನಾವು ಸರ್ಕಾರಕ್ಕೆ ಎಷ್ಟು ದಂಡ ಹಾಕಬೇಕು? ಎಂದು ಪ್ರಶ್ನಿಸಿದ್ದಾರೆ.

ಸೋನು ಗೌಡ ಕನ್ನಡ ಚಿತ್ರರಂಗ ಪ್ರವೇಶಿಸಿದ್ದು ‘ಇಂತಿ ನಿನ್ನ ಪ್ರೀತಿಯ’ ಚಿತ್ರದ ಮೂಲಕ. ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಈ ಹಿಂದೆ ಸೋನು ನಗರದಲ್ಲಿನ ರಸ್ತೆ ಗುಂಡಿಗಳ ವಿರುದ್ಧ ಮತ್ಸ್ಯಕನ್ಯೆ ವೇಷಧರಿಸಿ ಪ್ರತಿಭಟನೆಯನ್ನೂ ನಡೆಸಿದ್ದರು.