karnataka

ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

By KOLAR NEWS CHANDRU

January 01, 2023

ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.

ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ.

ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು ಉತ್ಪನ್ನವಾಗಿ ಕೇಂದ್ರ ಸರಕಾರವು ಗುರುತಿಸಿ ಗೌರವಿಸಿದೆ. ಈ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಸ್ವತಃ ಟೊಮೇಟೋ ಬೆಳೆಗಾರರು ಮತ್ತು ಮಾರಾಟಗಾರರು ಆಗಿರುವ ರೋಟರಿ ಸೆಂಟ್ರಲ್ ಅಧ್ಯಕ್ಷ ಹಾಗೂ ಜೆಡಿಎಸ್ ಕೋಲಾರ ಅಭ್ಯರ್ಥಿ ಸಿ.ಎಂ.ಆರ್.ಶ್ರೀನಾಥ್ ವಿಶೇಷ ಅಂಚೆ ಲಕೋಟೆಯನ್ನು ಪ್ರಾಯೋಜಿಸಿದ್ದರು.

ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಸುಮಾರು ಎರಡು ಸಾವಿರ ವಿಶೇಷ ಅಂಚೆ ಲಕೋಟೆ ಮುದ್ರಿಸಲಾಗಿದೆ. ಮೈಸೂರು, ಬೆಂಗಳೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಪ್ರಧಾನ ಅಂಚೆ ಕಚೇರಿಯಲ್ಲಿ ಮಾರಾಟಕ್ಕೆ ಲಭ್ಯ ಇವೆ ಎಂದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ ಮಾತನಾಡಿ ಸರಕಾರವು ಒಂದು ಜಿಲ್ಲೆ ಒಂದು ಬೆಳೆ ಮಾದರಿಯಲ್ಲಿ ರೈತರು ಟೊಮೇಟೋಗೆ ಉತ್ತೇಜನ ನೀಡಲು ಹೊರಟಿದ್ದಾರೆ ಮಾರುಕಟ್ಟೆಗೆ ಪೂರಕವಾದ ಬೆಲೆ ಇಲ್ಲದಿಂದರೂ ರೈತರು ಮಾತ್ರ ಟೊಮೇಟೋ ಬೆಳೆಯುವುದು ಮಾತ್ರ ಕಡಿಮೆಯಾಗಿಲ್ಲ ಸರಕಾರವು ಪೋತ್ಸಾಹಧನ ನೀಡುವ ಮೂಲಕ ರೈತರ ಆರ್ಥಿಕವಾಗಿ ಬೆಂಬಲ ನೀಡುವ ಕೆಲಸವು ನಡೆಯುತ್ತಾ ಇದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ಅಂಚೆ ಅಧೀಕ್ಷಕ ಆರ್. ಸುಭಾನಿ, ಪೋಸ್ಟ್ ಮಾಸ್ಟರ್ ಭಾಗ್ಯಲಕ್ಷ್ಮಿ, ಒಂದು ಬೆಳೆ ಒಂದು ಉತ್ಪನ್ನ ಜಿಲ್ಲಾ ಸಮನ್ವಯಾದಕಾರಿ ಸೋಮಶೇಖರ್, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ರೋಟರಿ ಸುಧಾಕರ್, ಅಂಚೆ ಇಲಾಖೆಯ ಬಿ.ವಿ.ಸತೀಶ್ ಕುಮಾರ್ ಶಶಿಕುಮಾರ್ ಅಂಚೆ ಲಕೋಟೆ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು.