ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ.) ತಂಡ 5 ರನ್ ನಿಂದ ಸೋಲು ಕಂಡಿದೆ.
1 ನೋಬಾಲ್ ನಿಂದಾಗಿ ಆರ್.ಸಿ.ಬಿ. ಪಂದ್ಯ ಕಳೆದುಕೊಳ್ಳುವಂತಾಗಿದ್ದು, ತಂಡದ ನಾಯಕ ವಿರಾಟ್ ಕೊಹ್ಲಿ ಆಕ್ರೋಶ ಹೊರಹಾಕಿದ್ದಾರೆ. ಮುಂಬೈ ತಂಡ ನೀಡಿದ 187 ರನ್ ಗೆಲುವಿನ ಗುರಿ ಬೆನ್ನತ್ತಿದ್ದ ಆರ್.ಸಿ.ಬಿ.ಗೆ ಕೊನೆಯ ಓವರಿನಲ್ಲಿ 17 ರನ್ ಗಳಿಸುವ ಅವಶ್ಯಕತೆ ಇತ್ತು.
ಲಸಿತ್ ಮಾಲಿಂಗ ಎಸೆದ ಕೊನೆಯ ಓವರ್ ನ ಮೊದಲ ಎಸೆತದಲ್ಲಿ ಶಿವಂ ದುಬೆ ಸಿಕ್ಸರ್ ಬಾರಿಸಿದ್ದಾರೆ. ಬಳಿಕ 4 ಎಸೆತಗಳಲ್ಲಿ ಸಿಂಗಲ್ಸ್ ದಾಖಲಾಗಿ, ಕೊನೆಯ ಎಸೆತದಲ್ಲಿ ಪಂದ್ಯವನ್ನು ಟೈ ಮಾಡಲು 7 ರನ್ ಅವಶ್ಯಕತೆ ಇತ್ತು. ಕೊನೆಯ ಎಸೆತವನ್ನು ಲಸಿತ್ ಮಾಲಿಂಗ ನೋಬಾಲ್ ಹಾಕಿದ್ದರು ಕೂಡ ಅಂಪೈರ್ ನೋ ಬಾಲ್ ನೀಡಲಿಲ್ಲ.
ಇದರಿಂದಾಗಿ ಫ್ರೀ ಹಿಟ್ ನಿರಾಕರಿಸಲ್ಪಟ್ಟು, ಸಿಂಗಲ್ ರನ್ ಮಾತ್ರ ದಾಖಲಾಯಿತು. ಮುಂಬೈ ಇಂಡಿಯನ್ಸ್ 5 ರನ್ ಅಂತರದಿಂದ ಗೆಲುವು ಕಂಡಿದೆ. ಮಾಲಿಂಗ ಕೊನೆ ಎಸೆತದಲ್ಲಿ ನೋ ಬಾಲ್ ಹಾಕಿದ್ದು ಟಿವಿ ಸ್ಕ್ರೀನ್ ನಲ್ಲಿ ರಿಪ್ಲೇ ತೋರಿಸಿದಾಗ ಗೊತ್ತಾಗಿದ್ದು, ವಿರಾಟ್ ಕೊಹ್ಲಿ ಅಸಮಾಧಾನ ತೋರಿದ್ದಾರೆ. ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಯೂ ತಮ್ಮ ಆಕ್ರೋಶ ಹೊರಹಾಕಿದ್ದಾರೆ.