ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್,ಶಿವರಾಜ್ ಕುಮಾರ್ ನಂತರ ಕನ್ನಡದ ಮತ್ತೊಬ್ಬ ನಟ ಗೌರವ ಡಾಕ್ಟರೇಟ್ ಪಡೆಯಲಿದ್ದಾರೆ. ಅವರು ಬೇರೆ ಯಾರು ಅಲ್ಲ ಕ್ರೇಜಿ ಸ್ಟಾರ್ ರವಿ ಚಂದ್ರನ್. ಬೆಂಗಳೂರಿನ ಸಿ ಎಮ್ ಆರ್ ವಿಶ್ವ ವಿದ್ಯಾನಿಲಯ ರವಿ ಚಂದ್ರನ್ ರಿಗೆ ಗೌರವ ಡಾಕ್ಟರೇಟ್ ನೀಡುತ್ತಿದೆ.
ಈ ಹಿಂದೆ ರವಿಚಂದ್ರನ್ ಅಭಿಮಾನಿಗಳು ತಮ್ಮ ಪ್ರೀತಿಯ ನಟನಿಗೆ ಡಾಕ್ಟರೇಟ್ ನೀಡಬೇಕು ಎಂದು ತಮ್ಮ ಆಸೆ ವ್ಯಕ್ತ ಪಡಿಸಿದ್ದರು. ಇದೀಗ ಅವರ ಬಯಕೆ ಈಡೇರಿದೆ. ನವೆಂಬರ್ 3 ರಂದು ದೊಡ್ಡ ಕಾರ್ಯಕ್ರಮದ ಮೂಲಕ ರವಿ ಚಂದ್ರನ್ ರಿಗೆ ಸಿ ಎಮ್ಆರ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಲು ತಯಾರಿ ಮಾಡಿಕೊಂಡಿದೆ. ರವಿ ಚಂದ್ರನ್ ಆಪ್ತ ಮೂಲಗಳು ಈ ಸುದ್ದಿಯನ್ನು ‘ಫಿಲ್ಮಿ ಬೀಟ್ ಕನ್ನಡ’ಕ್ಕೆ ಖಚಿತ ಪಡಿಸಿದ್ದಾರೆ.
ನಿರ್ಮಾಪಕ ವೀರಾಸ್ವಾಮಿ ಪುತ್ರ ರವಿ ಚಂದ್ರನ್ 1971ರಲ್ಲಿ ಬಾಲ ನಟನಾಗಿ ‘ಕುಲ ಗೌರವ’ ಸಿನಿಮಾದಲ್ಲಿ ನಟಿಸಿದರು. ನಂತರ 1982ರಲ್ಲಿ ‘ಕದೀಮ ಕಳ್ಳರು’ಸಿನಿಮಾದ ನಿರ್ಮಾಣ ಮಾಡಿ ಒಂದು ಪಾತ್ರವನ್ನು ನಿರ್ವಹಿಸಿದರು. ‘ಪ್ರೇಮಲೋಕ’ ಚಿತ್ರದ ಮೂಲಕ ನಿರ್ದೇಶನ ಶುರು ಮಾಡಿ, ದೊಡ್ಡ ಹಿಟ್ ನೀಡಿದರು.
ಅಲ್ಲಿಂದ ಶುರುವಾದ ರವಿ ಚಂದ್ರನ್ ಪ್ರಯಾಣ ಇಂದಿಗೂ ಮುಂದುವರೆದಿದೆ. ನಟ,ನಿರ್ದೇಶಕ, ನಿರ್ಮಾಪಕ, ಗೀತಾ ರಚನೆಗಾರ, ಸಂಗೀತ ನಿರ್ದೇಶಕ, ಸಂಭಾಷಣೆಕಾರನಾಗಿ ರವಿ ಚಂದ್ರನ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 85ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.