ದೇವರು

ಕೋಲಾರದಲ್ಲಿ ರಾಕ್ಷಸ ರಾವಣನಿಗೂ ಪೂಜೆ!

By KOLAR NEWS CHANDRU

February 08, 2023

ಕೋಲಾರ:- ರಾಮನ ಪೂಜೆ ಎಲ್ಲಾ ಕಡೆ ನಡೆಯುತ್ತದೆ ಅದರಲ್ಲಿ ವಿಶಿಷ್ಟತೆ ಏನೂ ಇಲ್ಲ ಆದರೆ, ತಾಲ್ಲೂಕಿನ ಸುಗಟೂರು ಮತ್ತು ವಕ್ಕಲೇರಿ ಗ್ರಾಮಗಳಲ್ಲಿ ನಂತರ ಶಿವ ಭಕ್ತನಾದ ರಾವಣನಿಗೂ ಪ್ರಾಧಾನ್ಯತೆ ನೀಡಿ ಪೂಜಿಸುವ ವಿಶಿಷ್ಟ ಪದ್ದತಿ ರೂಢಿಯಲ್ಲಿದೆ. ವಕ್ಕಲೇರಿ ಗ್ರಾಮದಲ್ಲಿ ಮಾರ್ಕಂಡೇಶ್ವರ ಸ್ವಾಮಿ ರಥೋತ್ಸವ ಮುಗಿದಿದ್ದು, ಫೆ.7ರ ಮಂಗಳವಾರ ರಾತ್ರಿ 10 ತಲೆಗಳನ್ನೊತ್ತ ರಾವಣನ ಮೂರ್ತಿ ಮತ್ತು ಮೇಲೆ ಮಾರ್ಕಂಡೇಶ್ವರ ಸ್ವಾಮಿಯ ಮೂರ್ತಿಗಳನ್ನಿಟ್ಟು ವೈಭವದಿಂದ ರಾವಣೋತ್ಸವ ನಡೆಸಲಾಯಿತು. ಅದೇ ರೀತಿ ತಾಲ್ಲೂಕಿನ ಸುಗಟೂರು ಗ್ರಾಮದಲ್ಲೂ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ ನಡೆದ ನಂತರ ವೈಭವದಿಂದ ರಾವಣೋತ್ಸವವನ್ನು ಆಚರಿಸಲಾಗುತ್ತದೆ. ಶ್ರೀರಾಮ, ಹನುಮ ಈ ನಾಡಿನ ಪ್ರಮುಖ ದೈವವಾಗಿದ್ದು, ಹನುಮನಿಲ್ಲದ ಊರೇ ಇಲ್ಲ ಎಂಬ ಪ್ರತೀತಿಯೂ ಇದೆ. ಆದರೆ ರಾಮನಿಗೆ ವೈರಿಯಾಗಿ ಸೀತಾಮಾತೆಯನ್ನು ಹೊತ್ತೊಯ್ದು ಕಿರುಕುಳ ನೀಡಿ ಕೊನೆಗೆ ರಾಮನಿಂದಲೇ ಹತನಾಗುವ ರಕ್ಕಸ ರಾವಣನಿಗೂ ಪೂಜೆ ನಡೆಯುತ್ತದೆ ಎಂದರೆ ವಿಶಿಷ್ಟವೇ ಅಲ್ಲವೇ?

ಶಿವಭಕ್ತ ರಾವಣನಿಗೂ ವಿಶೇಷ ಪೂಜೆ ಇಂತಹದೊAದು ಅಪರೂಪದ, ವೈಭವದ ಪೂಜೆ ಶಿವಭಕ್ತ ರಾವಣನಿಗೂ ಸುಗಟೂರು ಮತ್ತು ವಕ್ಕಲೇರಿ ಗ್ರಾಮಗಳಲ್ಲಿ ಅನಾದಿ ಕಾಲದಿಂದಲೂ ಜನತೆ ಸಲ್ಲಿಸುತ್ತಾ ಬಂದಿದ್ದಾರೆ. ಸುಗಟೂರು, ವಕ್ಕಲೇರಿ ಗ್ರಾಮದಲ್ಲಿ ರಾವಣೋತ್ಸವಕ್ಕೆ ವಿಶಿಷ್ಟ ಪ್ರಧಾನ್ಯತೆ ನೀಡಲಾಗುತ್ತದೆ, ಇಡೀ ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ, ಬೃಹತ್ ಪುಷ್ಪ ಪಲ್ಲಕ್ಕಿಯಲ್ಲಿ 10 ತಲೆಗಳನ್ನೊತ್ತ ಬೃಹತ್ ಗಾತ್ರದ ರಾವಣನನ್ನು ಪ್ರತಿಷ್ಟಾಪಿಸಲಾಗುತ್ತದೆ.

ಈ ಬೃಹತ್ ಪುಷ್ಪಪಲ್ಲಕ್ಕಿಯಲ್ಲಿ ಕೆಳಭಾಗದಲ್ಲಿ ರಾವಣ ಮತ್ತು ಮೇಲೆ ಶಿವನನ್ನು ಇಟ್ಟು ಪೂಜಿಸುವ ವೈಭವದ ಉತ್ಸವ ಇಲ್ಲಿ ನಡೆಯುತ್ತಾ ಬಂದಿದೆ. ಗ್ರಾಮದ ಜನತೆ ಮಾತ್ರ ಮೊದಲು ಮಾರ್ಕಂಡೇಶ್ವರಸ್ವಾಮಿಯ ಭವ್ಯ ರಥೋತ್ಸವ, ಪೂಜಾ ಕಾರ್ಯಗಳನ್ನು ಮುಗಿಸಿದ ನಂತರ ರಥೋತ್ಸವ ಜಾತ್ರೆಯ ಅಂತಿಮ ದಿನ ಶಿವ ಭಕ್ತ ರಾವಣನನ್ನು ಸಹಾ ಅಷ್ಟೇ ಭಕ್ತಿಯಿಂದ ಪೂಜಿಸಿ, ಆರಾಧಿಸುತ್ತಾರೆ.