ಹೈದರಾಬಾದ್: ಧೂಮಪಾನ ನಿಷೇಧ ಪ್ರದೇಶದಲ್ಲಿ ಸಿಗರೇಟ್ ಸೇದಿದ್ದಕ್ಕಾಗಿ ಟಾಲಿವುಡ್ ನಟ ರಾಮ್ ಪೋಥಿನೇನಿ ಅವರಿಗೆ ಸೋಮವಾರ ಹೈದರಾಬಾದ್ ಪೊಲೀಸರು 200 ರೂಪಾಯಿ ದಂಡ ವಿಧಿಸಿದ್ದಾರೆ.
ಈ ಘಟನೆ ನಗರದ ಐತಿಹಾಸಿಕ ಚಾರ್ಮಿನಾರ್ ಬಳಿ ನಡೆದಿದೆ. ನಟ ರಾಮ್ ತಮ್ಮ ಮುಂಬರುವ ‘ಐಸ್ಮಾರ್ಟ್ ಶಂಕರ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಿನಿಮಾದಲ್ಲಿ ಅವರ ಪಾತ್ರದ ಭಾಗವಾಗಿ ನಟ ಸಿಗರೇಟ್ ಸೇದಿದ್ದರು. ನಟ ರಾಮ್ ಸಿಗರೇಟ್ ನಿಷೇಧಿಸಿದ್ದ ಪ್ರದೇಶದಲ್ಲಿ ಧೂಮಪಾನ ಮಾಡಿದ್ದರು. ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದರು. ಜೊತೆಗೆ ಹೈದರಾಬಾದ್ ಪೊಲೀಸರಿಗೂ ಟ್ಯಾಗ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (ಕೊಪ್ಟಾ) 2003 ರ ಅಡಿಯಲ್ಲಿ ದಂಡ ವಿಧಿಸಿದ್ದಾರೆ. ರಾಮ್ ಕೂಡ ದಂಡದ ಶುಲ್ಕವನ್ನು ಪಾವತಿಸಿದ್ದಾರೆ.
ಇಲ್ಲಿಯವರೆಗೆ ಚಾರ್ಮಿನಾರ್ ನಲ್ಲಿ ಧೂಮಪಾನ ಮಾಡಿದ್ದಕ್ಕಾಗಿ 20 ಜನರನ್ನು ಹಿಡಿದು ದಂಡ ವಿಧಿಸಲಾಗಿದೆ. ಇದೇ ರೀತಿ ಕಾರ್ಯಚರಣೆಯನ್ನು ಮುಂದುವರಿಸುತ್ತೇವೆ. ಇದರಿಂದ ಜನರಿಗೆ ತಂಬಾಕಿನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ ಎಂದು ಸಬ್ ಇನ್ಸ್‍ಪೆಕ್ಟರ್ ಬಿ.ಪಾಂಡರಿ ಹೇಳಿದ್ದಾರೆ. ಇಸ್ಮಾರ್ಟ್ ಶಂಕರ್’ ಸಿನಿಮಾವನ್ನು ಪ್ರಸ್ತುತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದ ಮಾಡುತ್ತಿದ್ದು, ನಭಾ ನಟೇಶ್ ಮತ್ತು ನಿಧಿ ಅಗರ್ವಾಲ್ ಸಿನಿಮಾದಲ್ಲಿ ಪ್ರಮುಖವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ.