ರಾಜಕೀಯ

ನೆಹರೂ, ಇಂದಿರಾಗಾಂಧಿ ನಂತರ ಸ್ಪಷ್ಟ ಬಹುಮತ ಪಡೆದ ಮೊದಲ ಪ್ರಧಾನಿ ನರೇಂದ್ರ ಮೋದಿ…!

By admin

May 24, 2019

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 302 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಮತ್ತೆ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮಾಜಿ ಪ್ರಧಾನಿಗಳಾದ ದಿವಂಗತ ಜವಹರ್ ಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ಬಳಿಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಪಡೆಯುತ್ತಿರುವ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಅವರು ಪಾತ್ರರಾಗಿದ್ದಾರೆ.

ಹೌದು. 48 ವರ್ಷಗಳ ಬಳಿಕ ಸ್ಪಷ್ಟ ಬಹುಮತದ ಬಳಿಕ ಮೋದಿ ಅವರು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ದೇಶದೆಲ್ಲೆಡೆ ಎದ್ದಿದ್ದ ಮೋದಿ ಸುನಾಮಿಗೆ ಪ್ರತಿಪಕ್ಷಗಳು ಕೊಚ್ಚಿ ಹೋಗಿವೆ. ಭರ್ಜರಿ ಜಯದ ಮೂಲಕ ಈ ಹಿಂದೆ ಇಂದಿರಾಗಾಂಧಿ ಮತ್ತು ಜವಹಾರ್ ಲಾಲ್ ನೆಹರೂ ಅವರು ನಿರ್ಮಿಸಿದ್ದ ದಾಖಲೆಯನ್ನು ಮೋದಿ ಸರಿಗಟ್ಟಿದ್ದಾರೆ. ಅಲ್ಲದೆ ದೇಶಾದ್ಯಂತ ಮೋದಿ ಜಯದ ವಿಜಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಪಕ್ಷ ಅಭೂತಪೂರ್ವ ಗೆಲುವನ್ನು ತನ್ನದಾಗಿಸಿಕೊಂಡಿದೆ. ಈ ಗೆಲುವು 2014ರ ಲೋಕಸಭಾ ಚುನಾವಣಾ ಜಯವನ್ನೂ ಮೀರಿಸಿದೆ. ಆ ಮೂಲಕ ಪ್ರಧಾನಿ ಮೋದಿ ದೇಶದ ರಾಜಕೀಯ ಇತಿಹಾಸದಲ್ಲೇ ಅಪೂರ್ವ ಸಾಧನೆ ಗೈದಿದ್ದು, ಸ್ವಂತ ಬಲದಿಂದಲೇ ಸತತ 2ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದ ದೇಶದ ಮೂರನೇ ಪ್ರಧಾನಿಯಾಗಿದ್ದಾರೆ.ಅಲ್ಲದೆ ಈ ಸಾಧನೆಗೈದ ದೇಶದ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಕೀರ್ತಿಗೂ ಮೋದಿ ಭಾಜನರಾಗಿದ್ದಾರೆ. 1971ರ ನಂತರ ಯಾವ ಪ್ರಧಾನಿ ಕೂಡ ಸತತ 2ನೇ ಬಾರಿಗೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರಲಿಲ್ಲ. ಆದರೆ ಮೋದಿ ಮೋಡಿಗೆ ಇಡೀ ದೇಶವೇ ಮನಸೋತಿದ್ದು, ಭರ್ಜರಿ ಬಹುಮತ ನೀಡಿ ಮತ್ತೆ ಮೋದಿ ಪ್ರಧಾನಿ ಸ್ಥಾನದಲ್ಲಿ ಆಡಳಿತ ನಡೆಸಲು ಅವಕಾಶ ಮಾಡಿಕೊಡಲಾಗಿದೆ.

1971ರಲ್ಲಿ ಇಂದಿರಾ ಗಾಂಧಿ ಅವರು ಸತತ ಎರಡನೇ ಬಾರಿ ಬಹುಮತದೊಂದಿಗೆ ಪ್ರಧಾನಿಯಾಗಿದ್ದರು. 1971ರ ನಂತರ ಕಾಂಗ್ರೆಸ್ ಪಕ್ಷ ಸತತವಾಗಿ ಅಧಿಕಾರಕ್ಕೆ ಬಂದಿತ್ತಾದರೂ ಪ್ರಧಾನಿಗಳು ಬದಲಾಗಿದ್ದರು. 2004 ರಿಂದ 2009 ಮತ್ತು 2009ರಿಂದ 2014ರವರೆಗೂ ಮನಮೋಹನ್ ಸಿಂಗ್ ಸತತ ಎರಡು ಬಾರಿ ಪ್ರಧಾನಿಯಾದರೂ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಇಲ್ಲದಿದ್ದ ಕಾರಣಕ್ಕೆ ಮೈತ್ರಿಕೂಟದ ಸಹಾಯದಿಂದ ಸರ್ಕಾರ ರಚನೆ ಮಾಡಲಾಗಿತ್ತು. ಆದರೆ ಇದೀಗ 48 ವರ್ಷಗಳ ನಂತರ ಮೊದಲ ಬಾರಿಗೆ ಬಿಜೆಪಿ ಹೊಸ ಇತಿಹಾಸ ಸೃಷ್ಟಿಸಿದ್ದು, ಈ ಹಿಂದೆ ಇಂದಿರಾಗಾಂಧಿ ಮತ್ತು ನೆಹರು ಮಾಡಿದ್ದ ಈ ಸಾಧನೆಯನ್ನು ಪ್ರಧಾನಿ ಮೋದಿ ಮಾಡಿ ತೋರಿಸಿದ್ದಾರೆ.