ಸ್ಟಾರ್ ನಟರಿಬ್ಬರ ಅಭಿಮಾನಿಗಳಿಗೆ ಥ್ರಿಲ್ ನೀಡಲಿದೆ ಈ ಸುದ್ದಿ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಒಂದೇ ಚಿತ್ರದಲ್ಲಿ ಅಭಿನಯಿಸುವುದಾಗಿ ಹೇಳಿದ್ದಾರೆ.
ಈ ಮೂಲಕ ಇಬ್ಬರೂ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗತೊಡಗಿದೆ. ‘ನಟಸಾರ್ವಭೌಮ’ ಯಶಸ್ಸಿನ ಹಿನ್ನೆಲೆಯಲ್ಲಿ ಇಂದು ಫೇಸ್ ಬುಕ್ ಲೈವ್ ಗೆ ಬಂದಿದ್ದರು.
ಅಪ್ಪು ಫೇಸ್‍ಬುಕ್ ಲೈವ್‍ಗೆ ಬಂದಿದ್ದ ವೇಳೆ ಸ್ಟಾರ್ ನಟರುಗಳ ಅಭಿಮಾನಿಗಳು ಮಲ್ಟಿಸ್ಟಾರ್ ಸಿನಿಮಾ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಆಗ ಪುನೀತ್ ರಾಜ್‍ಕುಮಾರ್ ಅವರು ಒಂದು ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಪುನೀತ್, ಒಳ್ಳೆಯ ಕಥೆ ಸಿಕ್ಕರೆ ಖಂಡಿತ ಮಲ್ಟಿ ಸ್ಟಾರ್ ಚಿತ್ರದಲ್ಲಿ ಅಭಿನಯಿಸುವುದಾಗಿ ತಿಳಿಸಿದ್ದಾರೆ. ಫೇಸ್ ಬುಕ್ ಲೈವ್ ಮುಗಿಸಿದ ಪುನೀತ್, ಟಿ.ಎಸ್. ನಾಗಾಭರಣ ನಿರ್ದೇಶನದ, ಚಿರಂಜೀವಿ ಸರ್ಜಾ ಅಭಿನಯದ ‘ಜುಗಾರಿ ಕ್ರಾಸ್’ ಚಿತ್ರದ ಮುಹೂರ್ತಕ್ಕೆ ಆಗಮಿಸಿದ್ದಾರೆ.
ಜುಗಾರಿ ಕ್ರಾಸ್ ಮುಹೂರ್ತಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರು ಪುನೀತ್ ಹಾಗೂ ಯಶ್ ಅವರನ್ನು ಒಟ್ಟಿಗೆ ಸಿನಿಮಾ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಯಶ್, ಅಪ್ಪು ಓಕೆ ಎಂದರೆ ನಾನು ಸಿನಿಮಾ ಮಾಡಲು ರೆಡಿ ಇದ್ದೇನೆ ಎಂದು ಹೇಳಿದ್ದಾರೆ. ಆಗ ಪುನೀತ್ ಅವರು ನಾನು ಯಾವಾಗಲೂ ರೆಡಿ ಆಗಿರುತ್ತೇನೆ. ಒಟ್ಟಿಗೆ ಸಿನಿಮಾ ಮಾಡೋಣ ಎಂದು ಯಶ್‍ಗೆ ಹೇಳಿದ್ದಾರೆ.