ಮಕ್ಕಳು ಮೊಬೈಲ್ ನೋಡ್ತಾರೆ, ಟಿವಿ ನೋಡ್ತಾರೆಂಬ ಪಾಲಕರ ಆರೋಪ ಈಗ ಸಾಮಾನ್ಯವಾಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಪಾಲಕರ ಆತಂಕಕ್ಕೆ ಕಾರಣವಾಗಿರುವುದು ಪಬ್ಜಿ ಗೇಮ್. ಮಕ್ಕಳ ಪ್ರಾಣವನ್ನೇ ಪಡೆಯುತ್ತಿರುವ ಈ ಪಬ್ಜಿ ಆಟಕ್ಕೆ ಮಕ್ಕಳು ದಾಸರಾಗುತ್ತಿದ್ದಾರೆ. ಇದು ಮಕ್ಕಳ ತಪ್ಪಲ್ಲ. ಈಗಿನ ವಾತಾವರಣ, ಆಟವಾಡಲು ಜಾಗವಿಲ್ಲದ ಪರಿಸ್ಥಿತಿ ಮಕ್ಕಳನ್ನು ಆನ್ಲೈನ್ ಗೇಮ್ ಗೆ ಪ್ರೋತ್ಸಾಹಿಸುತ್ತಿದೆ.
ಮಕ್ಕಳು ಅತಿ ಹೆಚ್ಚಿನ ಮಟ್ಟದಲ್ಲಿ ಆನ್ಲೈನ್ ಗೇಮ್ ಗಳನ್ನು ಆಡಿದ್ರೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ನಿದ್ರೆ ಕೊರತೆ, ಶಕ್ತಿ ಕಡಿಮೆಯಾಗುವುದು, ದಣಿವು, ಸುಸ್ತು, ತಲೆನೋವು, ಅದ್ರಲ್ಲೂ ಮೈಗ್ರೇನ್, ದೃಷ್ಟಿದೋಷ, ಮೆದುಳಿನ ಸಮಸ್ಯೆ, ಕುತ್ತಿಗೆ ಮತ್ತು ಸ್ನಾಯು ನೋವು ಕಾಡುತ್ತದೆ.
ನಿಮ್ಮ ಮಕ್ಕಳು ದಿನದಲ್ಲಿ 4-5 ಗಂಟೆ ಪಬ್ಜಿ ಆಟವಾಡ್ತಿದ್ದಾರೆ, ಅವ್ರ ಸ್ವಭಾವದಲ್ಲಿ ಬದಲಾವಣೆಯಾಗ್ತಿದೆ ಎಂದಾದ್ರೆ ತಕ್ಷಣ ಎಚ್ಚೆತ್ತುಕೊಳ್ಳಿ. ಮಕ್ಕಳಿಗೆ ಬೇರೆ ಆಟ ಆಡುವಂತೆ ಸಲಹೆ ನೀಡಿ. ಮಕ್ಕಳು ತಿದ್ದಿಕೊಳ್ಳದೆ ಹೋದಲ್ಲಿ ಅಥವಾ ಅವ್ರು ಪಬ್ಜಿ ವ್ಯಸನಿಗಳಾಗಿದ್ದಾರೆಂಬುದು ಸ್ಪಷ್ಟವಾದಲ್ಲಿ ತಕ್ಷಣ ಮನೋವೈದ್ಯರ ಬಳಿ ಕರೆದುಕೊಂಡು ಹೋಗಿ.
ಮಕ್ಕಳಿಗೆ ಗೊತ್ತಿಲ್ಲದೆ ವೈ-ಫೈ ಸ್ಪೀಡ್ ಕಡಿಮೆ ಮಾಡಿ. ಇದ್ರಿಂದ ನೆಟ್ ವೇಗ ಕಡಿಮೆಯಾಗುತ್ತದೆ. ಆಟಕ್ಕೆ ಅಡ್ಡಿಯಾಗುತ್ತದೆ. ಮಕ್ಕಳು ಬೇಸತ್ತು ಆಟ ಬಂದ್ ಮಾಡ್ತಾರೆ.ಮಕ್ಕಳಿಗೆ ಬೇರೆ ಆಟದ ಬಗ್ಗೆ ಹೇಳಿ. ಆನ್ಲೈನ್ ನಲ್ಲಿಯೇ ಮಕ್ಕಳಿಗೆ ಮನರಂಜನೆ ನೀಡುವಂತಹ ಆಟಗಳ ಬಗ್ಗೆ ತಿಳಿಸಿಕೊಡಿ. ಮಕ್ಕಳಿಗೆ ಹೊಸ ಆಟ ತಿಳಿಸುವ ಮೊದಲು ಆ ಆಟ ಹೇಗಿದೆ ಎಂಬುದನ್ನು ನೀವು ತಿಳಿದುಕೊಳ್ಳಿ.