ಗರ್ಭಿಣಿ ಮಹಿಳೆಯರಿಗೆ ಈ ಆಹಾರ ತಿನ್ನು, ಇದನ್ನು ತಿನ್ನಬೇಡ ಎಂದು ಮನೆಯವರು, ಸ್ನೇಹಿತರು ಸಲಹೆ ನೀಡುತ್ತಾರೆ. ವೈದ್ಯರು ಕೂಡ ಯಾವ ಆಹಾರಗಳನ್ನು ತೆಗೆದುಕೊಳ್ಳಬೇಕು, ಯಾವುದನ್ನು ತಿನ್ನದಿರುವುದು ಸೂಕ್ತ ಎಂಬ ಮಾಹಿತಿ ನೀಡುತ್ತಾರೆ. ಏಕೆಂದರೆ ಗರ್ಭಿಣಿ ಮಹಿಳೆಯರ ಆಹಾರಕ್ರಮ ಗರ್ಭದಲ್ಲಿ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಗರ್ಭಿಣಿಯರು ಪೌಷ್ಟಿಕಾಂಶಗಳಿರುವ ಆಹಾರವನ್ನು ತೆಗೆದುಕೊಳ್ಳುವುದರಿಂದ ಮಗು ಆರೋಗ್ಯಕರವಾಗಿ ಬೆಳೆಯುತ್ತದೆ. ಆದ್ದರಿಂದ ಕಾಳುಗಳನ್ನು ತಿನ್ನುವಂತೆ ಹೇಳುತ್ತಾರೆ.
ಕಾಳುಗಳಲ್ಲಿ ಒಂದು ಬಗೆಯಾದ ಚೆನ್ನಾ ಕೂಡ ಗರ್ಭಿಣಿಯರಿಗೆ ಸೇವಿಸಲು ಸೂಕ್ತವಾದ ಆಹಾರವಾಗಿದ್ದು ಇದನ್ನು ತಿನ್ನುವುದರಿಂದ ಪ್ರೊಟೀನ್, ನಾರಿನಂಶ, ಫೋಲೆಟ್, ಕಬ್ಬಿಣದಂಶ, ಮೆಗ್ನಿಷ್ಯಿಯಂ, ಪೊಟಾಷ್ಯಿಯಂ ದೊರೆಯುತ್ತದೆ. ಗರ್ಭಿಣಿ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚು. ಇದನ್ನು ತಡೆಗಟ್ಟಲು ಪೋಷಕಾಂಶವಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ರಕ್ತಹೀನತೆ ಸಮಸ್ಯೆ ಉಂಟಾದರೆ ಭ್ರೂಣದಲ್ಲಿರುವ ಮಗುವಿಗೆ ಆಮ್ಲಜನಕ ಸಾಕಷ್ಟು ಪ್ರಮಾಣದಲ್ಲಿ ದೊರೆಯದೆ ತೊಂದರೆಯುಂಟಾಗತ್ತದೆ.
ಆದ್ದರಿಂದ ಗರ್ಭಾವಸ್ಥೆಯಲ್ಲಿ ಕಬ್ಬಿಣನಂಶವಿರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಕಡಲೆ ತಿಂದರೆ ದೇಹದಲ್ಲಿ ಕಬ್ಬಿಣದಂಶ ಹೆಚ್ಚಾಗುವುದು, ಇದರಿಂದ ದೇಹದಲ್ಲಿ ಹೀಮೋಗ್ಲೋಬಿನ್ ಹೆಚ್ಚಾಗುವುದು, ದೇಹದಲ್ಲಿ ಕಬ್ಬಿಣದಂಶದ ಕೊರತೆ ಉಂಟಾದರೆ ಮಗು ಅವಧಿಪೂರ್ವ ಹುಟ್ಟುವ ಸಾಧ್ಯತೆ ಇದೆ. ಕೆಲ ಗರ್ಭಿಣಿಯರಿಗೆ ಮಧುಮೇಹ (gestational diabetes)ಬರುತ್ತದೆ, ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಕಡಿಮೆಯಾದಾಗ ಸಕ್ಕರೆಯಂಶ ಹೆಚ್ಚಾಗಿ ಮಧುಮೇಹ ಉಂಟಾಗುತ್ತದೆ. ರಕ್ತದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವಲ್ಲಿ ಕಡಲೆ ಸಹಕಾರಿಯಾಗಿದೆ. ಇದರಲ್ಲಿರುವ ನಾರಿನಂಶ ಇನ್ಸುಲಿನ್ ಸಮತೋಲನದಲ್ಲಿರುವಂತೆ ಮಾಡುತ್ತದೆ.
ಗರ್ಭಿಣಿಯರಿಗೆ ಮಗುವಿನ ಬೆಳವಣಿಗೆ ಸರಿಯಾಗಿ ಆಗಲು ಫಾಲಿಕ್ ಮಾತ್ರೆಗಳನ್ನು ನೀಡುತ್ತಾರೆ. ಕಡಲೆಯಲ್ಲಿ ಫೋಲೆಟ್ ಅಂಶ ಅಧಿಕವಿದ್ದು ಅದರಲ್ಲಿರುವ ಖನಿಜಾಂಶಗಳು ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ.. ಅಲ್ಲದೆ ಕಡಲೆಯಲ್ಲಿರುವ ಖನಿಜಾಂಶಗಳು ನ್ಯೂರೆಲ್ ಟ್ಯೂಬ್ ಡಿಫೆಕ್ಟ್ ಅಂದರೆ ಮಗುವಿನ ಮೆದುಳು ಹಾಗೂ ಬೆನ್ನುಮೂಳೆಗೆ ಹಾನಿಯಾಗದಂತೆ ರಕ್ಷಣೆ ಮಾಡುತ್ತದೆ. ಈ ಸಮಸ್ಯೆ ಗರ್ಭಿಣಿಯಾದ ಮೊದಲ ತಿಂಗಳಿನಲ್ಲಿ ಕೆಲವರಲ್ಲಿ ಕಂಡು ಬರುತ್ತದೆ. ಇದನ್ನು ತಡೆಗಟ್ಟುವಲ್ಲಿ ಪೋಷಕಾಂಶಗಳಿರುವ ಇಂಥ ಆಹಾರಗಳು ಸಹಕಾರಿ. ಗರ್ಭಾವಸ್ಥೆಯಲ್ಲಿ ಮಲಬದ್ಧತೆ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಕಡಲೆಯಲ್ಲಿ ನಾರಿನಂಶಗಳು ಅಧಿಕವಿರುವುದರಿಂದ ಮಲಬದ್ಧತೆ ಸಮಸ್ಯೆ ಹೋಗಲಾಡಿಸುವಲ್ಲಿ ಸಹಕಾರಿ.